ಮಂಗಳೂರು: ಉತ್ತರಕನ್ನಡ ಜಿಲ್ಲೆಯ ಕಾರವಾರ ವಲಯದ ಪಶ್ಚಿಮಘಟ್ಟ ಅರಣ್ಯ ವ್ಯಾಪ್ತಿಯಲ್ಲಿ ಅಪರೂಪದ ಪ್ರಭೇದಗಳಲ್ಲಿ ಒಂದಾದ ನೇರಳೆ ಏಡಿ ಪತ್ತೆಯಾಗಿದೆ. ಮಂಗಳೂರು ವಿಶ್ವವಿದ್ಯಾಲಯದ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ, ಬಂಟ್ವಾಳ ಎಸ್‌ವಿಎಸ್ ಕಾಲೇಜು ಉಪನ್ಯಾಸಕ ಸುಪ್ರೀತ್ ಕಡಕೋಳ್ ಅವರ ತಂಡಕ್ಕೆ ಸೆ.11ರಂದು ರಸ್ತೆಬದಿಯಲ್ಲಿ ಏಡಿ ಕಾಣಿಸಿದೆ.
ಈ ನೇರಳೆ ಬಣ್ಣದ ಏಡಿಗಳು 2015ರಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರದ ಅಂಬೋಲಿಯಲ್ಲಿ ಮರದ ಪೊಟರೆಯ ನೀರಿನಲ್ಲಿ ಪತ್ತೆಯಾಗಿತ್ತು. ಸಾಗರ ತಾಲೂಕಿನ ಶರಾವತಿ ನದಿ ಕಣಿವೆ ಪ್ರದೇಶದಲ್ಲಿ 2017ರಲ್ಲಿ ಕಂಡುಬಂದಿತ್ತು. ನಂತರ ಎಲ್ಲಿಯೂ ಪತ್ತೆಯಾಗಿರುವ ಕುರಿತು ಮಾಹಿತಿ ಇಲ್ಲ.
ಇವು ಸಿಹಿ ನೀರಿನ ಏಡಿಗಳಾಗಿದ್ದು, ಮಳೆಗಾಲ ಮಾತ್ರವೇ ಹೊರಬರುತ್ತವೆ. ಬೇಸಿಗೆಯಲ್ಲಿ ಇವು ತಂಪಾದ ಜಾಗದಲ್ಲಿ ಅವಿತಿರುತ್ತವೆ. ಮಾಫೋಮೆಟ್ರಿಕ್ ಅನಾಲಿಸಿಸ್ ಪ್ರಕಾರ ಇದು ಘಾಟಿಯಾನ ತಳಿಗೆ ಸೇರಿದ್ದು ಎಂಬ ಪ್ರಾಥಮಿಕ ಮಾಹಿತಿ ಲಭಿಸಿದೆ. ಇದು ಅದೇ ಪ್ರಭೇದವೇ ಅಥವಾ ವಿಭಿನ್ನವೇ ಎನ್ನುವ ಬಗ್ಗೆ ಮಂಗಳೂರು ವಿಶ್ವವಿದ್ಯಾಲಯದ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದಿಂದ ಹೆಚ್ಚಿನ ಅಧ್ಯಯನ ಕೈಗೊಳ್ಳಲು ತೀರ್ಮಾನಿಸಲಾಗಿದೆ.
“ಜೇಡಗಳ ಮೇಲಿನ ಸಂಶೋಧನೆ ನಡೆಸಲು ಕಾರವಾರಕ್ಕೆ ಭೇಟಿ ನೀಡಿದ ವೇಳೆ ನೇರಳೆ ಏಡಿ ಪತ್ತೆಯಾಗಿದೆ. ವಿಶೇಷ ಪ್ರಭೇದ ಆಗಿರುವ ಕಾರಣ ಅಧ್ಯಯನದ ಉದ್ದೇಶಕ್ಕಾಗಿ ವಿಶ್ವವಿದ್ಯಾಲಯಕ್ಕೆ ಒಪ್ಪಿಸಿದ್ದೇವೆ” ಎಂದು ಸುಪ್ರೀತ್ ಕಡಕೋಳ್ ತಿಳಿಸಿದ್ದಾರೆ.