ಪುತ್ತೂರು: ಮನೆಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾದ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿಯಲ್ಲಿ ವಾಸವಾಗಿದ್ದ ಉತ್ತರ ಪ್ರದೇಶ ಮೂಲದ ವ್ಯಕ್ತಿ ಮೊಬೈಲ್ ಸಂಖ್ಯೆ ಹಿಮಾಚಲ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಳಿವು ಪೊಲೀಸರಿಗೆ ಸಿಕ್ಕಿದೆ.
ಜಿಲ್ಲಾ ಪೊಲೀಸ್ ಇಲಾಖೆ ನೇತೃತ್ವದಲ್ಲಿ ನಡೆಯುತ್ತಿರುವ ತನಿಖೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಬೆಂಗಳೂರಿಗೆ ಭೇಟಿ ನೀಡುವುದಾಗಿ ಹೇಳಿ ತನ್ನ ಮನೆಯನ್ನು ತೊರೆದಿದ್ದ ಆ ವ್ಯಕ್ತಿ ಹಿಮಾಚಲ ಪ್ರದೇಶಕ್ಕೆ ಏಕೆ ಹೋಗಿರುವುದು ಅಥವಾ ಅವರ ಮೊಬೈಲ್ ಫೋನ್ ಬೇರೆಯವರು ಹೊತ್ತೊಯ್ದಿದ್ದಾರೆಯೇ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಅವರ ಪತ್ನಿಯ ಹೇಳಿಕೆಯ ಪ್ರಕಾರ, ಅವರು ಜುಲೈ 18 ರಿಂದ ಬೆಂಗಳೂರಿಗೆ ತೆರಳಿದ ನಂತರ ನಾಪತ್ತೆಯಾಗಿದ್ದರು. ಆ ಬಳಿಕ ಯಾವುದೇ ಮಾಹಿತಿ ಬಂದಿರಲಿಲ್ಲ. ಆತ ಅಲ್ಲಿಂದ ತಪ್ಪಿಸಿಕೊಳ್ಳಲೆಂದೇ ಹೋಗಿದ್ದಾನೋ ಅಥವಾ ಆತ ತಪ್ಪಿಸಿಕೊಳ್ಳುವುದರ ಹಿಂದೆ ಬೇರೆ ಕಾರಣಗಳಿವೆಯೋ ಗೊತ್ತಿಲ್ಲ ಈ ಬಗ್ಗೆ ತನಿಖೆಯಿಂದ ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
ಈ ದೂರಿಗೆ ಸಂಬಂಧಿಸಿ ಪೊಲೀಸ್ ತನಿಖೆ ಪ್ರಗತಿಯಲ್ಲಿರುವ ಸಂದರ್ಭ ನಾಪತ್ತೆಯಾದ ವ್ಯಕ್ತಿಯ ಚಹರೆ ದಿಲ್ಲಿಯಲ್ಲಿ ಬಂಧಿನತನಾದ ಭಯೋತ್ಪಾದಕನ ಚಹರೆಯನ್ನೇ ಹೊಂದಿದೆ ಎಂಬ ಸುದ್ದಿ ಹರಡಿ ಉಪ್ಪಿನಂಗಡಿ, ನೆಕ್ಕಿಲಾಡಿ ಪರಿಸರದ ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿತ್ತು.
ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಿದಲ್ಲಿ, ರಾಜ್ಯ ಪೊಲೀಸ್ ಇಲಾಖೆಯ ಮೂಲಕ ಸ್ಥಳೀಯ ಪೊಲೀಸರ ಮೂಲಕ ಪ್ರಾಥಮಿಕ ಮಾಹಿತಿಯನ್ನು ಒಟ್ಟುಗೂಡಿಸಲಾಗುತ್ತದೆ. ಅದರೆ ಉಪ್ಪಿನಂಗಡಿಯಿಂದ ನಾಪತ್ತೆಯಾದ ವ್ಯಕ್ತಿಯ ಬಗ್ಗೆ ಅಂತಹ ಯಾವುದೇ ಪ್ರಕ್ರಿಯೆ ಕೈಗೊಂಡಿಲ್ಲ ಎಂದು ಪೊಲೀಸರು ಹೇಳುತ್ತಾರೆ.
ತನಗೆ ಸಾಲಗಾರರ ಕಾಟ ತಪ್ಪಿಸಲು ಆತನೇ ತನಿಖಾ ತಂಡದ ವಶವಾಗಿದ್ದೇನೆ ಎಂಬ ವದಂತಿಯನ್ನು ಆ ವ್ಯಕ್ತಿಯೇ ತೇಲಿಬಿಡುವ ಸಾಧ್ಯತೆಯಿದೆ ಎಂದು ಕೆಲವರು ಹೇಳುತ್ತಾರೆ. ಪೊಲೀಸ್ ಸಿಬ್ಬಂದಿ ಎಲ್ಲಾ ಕೋನಗಳಿಂದ ತನಿಖೆ ಮುಂದುವರಿಸಿದ್ದಾರೆ ಮತ್ತು ಶೀಘ್ರವೇ ಪ್ರಕರಣವನ್ನು ಭೇದಿಸಲು ಆಶಿಸಿದ್ದಾರೆ.