ಮಂಗಳೂರು : ಮುಸ್ಲಿಂ ಯುವಕನೊಬ್ಬ ಯುವತಿಯೊಬ್ಬಳಿಗೆ ತಾನು ಹಿಂದೂ ಎಂದು ನಂಬಿಸಿ, ಮದುವೆಯಾಗುವ ಭರವಸೆ ನೀಡಿ ದೈಹಿಕ ಸಂಪರ್ಕ ನಡೆಸಿ, 35 ಲಕ್ಷ ದೋಚಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೈಸೂರು ಮೂಲದ ಸಂತ್ರಸ್ತ ಯುವತಿ ಮಂಗಳೂರು ಮಹಿಳಾ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಿಸಲಾಗಿದೆ.
ಮೈಸೂರು ಜಿಲ್ಲೆಯ ನಂಜನಗೂಡು ಮೂಲದ ಯುವತಿಯೊಬ್ಬಳಿಗೆ ಮಂಗಳೂರು ಕೊಣಾಜೆ ಸಮೀಪದ ಮುಡಿಪುವಿನ ಮೊಹಮ್ಮದ್ ಅಜ್ವಿನ್ ಎಂಬಾತ ಮೈಸೂರಿನಲ್ಲಿ ಪರಿಚಯವಾಗುತ್ತಾನೆ. ಪರಿಚಯ ಪ್ರೀತಿಗೆ ತಿರುಗಿದ್ದು, ಆತ ತಾನು ಹಿಂದೂ ಧರ್ಮದ ವ್ಯಕ್ತಿಯೆಂದು ನಂಬಿಸಿದ್ದಲ್ಲದೇ ಮದುವೆಯಾಗುವ ಭರವಸೆಯನ್ನೂ ನೀಡಿದ್ದ.
ಕೆಲ ಸಮಯದ ಬಳಿಕ ಆತ ಯುವತಿಯನ್ನು ಊಟಿಗೆ ಕರೆದೊಯ್ದು, ದೈಹಿಕ ಸಂಪರ್ಕ ನಡೆಸಿದ್ದಾಗಿಯೂ, ಈ ವೇಳೆ ಆ ಯುವತಿಯ ಅರೆ ನಗ್ನ ಫೋಟೋಗಳನ್ನು ತೆಗೆದಿದ್ದಾನೆಂದೂ ಹೇಳಲಾಗಿದೆ.
ಬಳಿಕ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ 35 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡಿದ್ದ. ಆದರೆ ಹಣ ಪಡೆಯುತ್ತಲೇ ಅಜ್ವಿನ್ ಮೈಸೂರಿನ ಕೆ.ಆರ್ ನಗರದಲ್ಲಿ ತಾನು ಕೆಲಸ ಮಾಡುತ್ತಿದ್ದ ಅಂಗಡಿ ಮಾಲಿಕನ ಮನೆಯಲ್ಲಿ ಯುವತಿಯ ಮೇಲೆ ಹಲ್ಲೆ ನಡೆಸಿದ್ದು ಈ ವೇಳೆ ಸ್ಥಳೀಯರೊಬ್ಬರು ಆಕೆಯನ್ನು ರಕ್ಷಿಸಿದ್ದರು. ಆತ ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿಯೂ ದೂರಿನಲ್ಲಿ ದಾಖಲಿಸಲಾಗಿದೆ.
ಬಳಿಕ ಆತ ಮೈಸೂರಿನಿಂದ ನಾಪತ್ತೆಯಾಗಿದ್ದು, ಆತನನ್ನು ಹುಡುಕಿಕೊಂಡು ಯುವತಿ 21 ನೇ ತಾರೀಖಿನಂದು ಕೊಣಾಜೆ ಮುಡಿಪುವಿನಲ್ಲಿ ಇರುವ ಆತನ ಮನೆಗೆ ಹೋಗಿದ್ದಾಳೆ. ಈ ಸಮಯದಲ್ಲಿ ಆತನ ಮನೆಯಲ್ಲಿ ಆತನ ಮನೆಯವರು ಸಂತ್ರಸ್ತ ಯುವತಿಯ ಮೇಲೆ ಹಲ್ಲೆಗೈದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.
ಬಳಿಕ ಯುವತಿ ಕೋಣಾಜೆ ಪೋಲಿಸ್ ಠಾಣೆಗೆ ತೆರಳಿದ್ದು, ಅಲ್ಲಿ ತನ್ನ ದೂರು ತೆಗೆದುಕೊಳ್ಳದ ಕಾರಣ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಆರೋಪಿಯ ವಿರುದ್ಧ ಪಾಂಡೇಶ್ವರ ಮಹಿಳಾ ಪೋಲಿಸ್ ಠಾಣೆಯಲ್ಲಿ Cr.no :69/2021 ಅನ್ವಯ ಸೆಕ್ಷನ್ 376,384,504,506, 417 r/w 149 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ತನಿಖೆ ನಡೆಸುತ್ತಿದ್ದಾರೆ.