ಸುಳ್ಯ: ಪಂಜ ವಲಯ ಅರಣ್ಯ ಇಲಾಖೆ ಮತ್ತು ಪೊಲೀಸ್ ಅರಣ್ಯ ಸಂಚಾರಿ ದಳ ಘಟಕ ಚಿಕ್ಕಮಗಳೂರು ಇವರ ಜಂಟಿ ಕಾರ್ಯಾಚರಣೆಯಲ್ಲಿ ಬಾಳಿಲದ ಮನೆಯೊಂದರ ಕೊಟ್ಟಿಗೆಯಲ್ಲಿ ರಕ್ತಚಂದನ ಸೆ.22 ರಂದು ಪತ್ತೆಯಾಗಿದೆ.
ಪೊಲೀಸ್ ಅರಣ್ಯ ಸಂಚಾರಿ ದಳ ಘಟಕಕ್ಕೆ ದೊರೆತ ಮಾಹಿತಿ ಮೇರೆಗೆ ಸೆ.22 ರಂದು ಮುಂಜಾನೆ ಬಾಳಿಲದ ಅಬ್ದುಲ್ ಎಂಬವರ ಮನೆಗೆ ಜಂಟಿ ಇಲಾಖೆಗಳ ಅಧಿಕಾರಿಗಳು ದಾಳಿ ನಡೆಸಿದಾಗ ಮನೆಯ ಕೊಟ್ಟಿಗೆಯಲ್ಲಿ 40 ತುಂಡು 260 ಕೆ.ಜಿ.ರಕ್ತ ಚಂದನ ಪತ್ತೆಯಾಗಿದ್ದು ಇಲಾಖೆಯವರು ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಬಾಳಿಲ ಗ್ರಾಮದ ಬಾಳಿಲ ನಿವಾಸಿಅಬ್ದುಲ್ ಮತ್ತು ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಕಟ್ಟತ್ತಾರು ನಿವಾಸಿ ಕೆ ಹಮೀದ್ ಎಂಬವರನ್ನು ವಶಕ್ಕೆ ಪಡೆದಿದ್ದು ಪ್ರಕರಣ ದಾಖಲಾಗಿದೆ. ಅವರನ್ನುಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಜಾಮೀನಿನ ಮೇಲೆ ಬಿಡುಗಡೆ ಗೊಂಡಿದ್ದಾರೆ.
ಪೊಲೀಸ್ ಅರಣ್ಯ ಸಂಚಾರಿ ದಳದ ಸಬ್ ಇನ್ಸ್ ಪೆಕ್ಟರ್ ಶೋಭಾ ಸಿಬ್ಬಂದಿಗಳು,ಪಂಜ ಅರಣ್ಯ ಇಲಾಖೆಯ ಎಡಮಂಗಲ ಉಪ ವಲಯ ಅರಣ್ಯಾಧಿಕಾರಿ ಯಶೋಧರ , ಅರಣ್ಯ ರಕ್ಷಕರಾದ ಭರಮಪ್ಪ ಬೆಳಗಲ್ಲು ,ಮನೋಹರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಮಂಜುನಾಥ್ ರವರು ಮುಂದಿನ ತನಿಖೆ ನಡೆಸುತ್ತಿದ್ದಾರೆ.