ಚಿಕ್ಕಮಗಳೂರು: ರೇಗಿಸಿದವನ ಮೇಲೆ ಮತ್ತು ಇತರರ ಮೇಲೆ ದಾಳಿ ಮಾಡಿದ ಹಿನ್ನಲೆ ಕೋತಿಯನ್ನು ಸೆರೆಹಿಡಿದು 22 ಕಿ.ಮೀ. ದೂರದ ದಟ್ಟ ಅರಣ್ಯಕ್ಕೆ ಬಿಡಲಾಗಿದ್ದ ಕೋತಿ ನಾಲ್ಕೇ ದಿನಕ್ಕೆ ಗೊಬ್ಬರದ ಲಾರಿ ಏರಿ ಮತ್ತೆ ಅದೇ ಜಾಗಕ್ಕೆ ಬಂದಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ.
ಸೆಪ್ಟೆಂಬರ್ 16 ರಂದು ಕೊಟ್ಟಿಗೆಹಾರ ಸಮೀಪದ ತುರುವೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿದ್ದ ಕೋತಿಯನ್ನು ಹಿಡಿಯಲು ಹೋದಾಗ ಅರಣ್ಯ ಇಲಾಖೆ ಸಿಬ್ಬಂದಿ ಜೊತೆ ಹೋಗಿದ್ದ ಆಟೋ ಚಾಲಕ ಕೋತಿಗೆ ರೇಗಿಸಿದ್ದರಿಂದ ರೊಚ್ಚಿಗೆದ್ದ ಕೋತಿ ಆತನ ಮೇಲೆ ದಾಳಿ ಮಾಡಿತ್ತು. ಅವನ ಕೈಕಚ್ಚಿ ಸೇಡು ತೀರಿಸಿಕೊಂಡಿತ್ತು. ಬಳಿಕ ಅವನನ್ನು ಹುಡುಕಿಕೊಂಡು ಆಟೋ ನಿಲ್ದಾಣಕ್ಕೆ ಬಂದು ಅವನ ಆಟೋ ಟಾಪ್ ಕಿತ್ತು ಹಾಕಿತ್ತು. ಕೋತಿ ಗಾಬರಿಯಿಂದ ಸ್ಥಳೀಯರ ಮೇಲೂ ದಾಳಿಗೆ ಮುಂದಾಗಿತ್ತು. ಆಗ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು. 18 ಗಂಟೆ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದು ಕೋತಿಯನ್ನು ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿ ಬಂದಿದ್ದರು.
ಕೋತಿಯನ್ನು ಸೆರೆ ಹಿಡಿದು ನಾಲ್ಕು ದಿನ ಕಳೆಯುವುದರೊಳಗೆ ಇದೀಗ ಕೋತಿ ಮತ್ತೆ ಕೊಟ್ಟಿಗೆಹಾರದಲ್ಲಿ ಎಲ್ಲಿ ಸೆರೆಯಾಗಿತ್ತೋ ಅಲ್ಲಿಗೆ ಬಂದು ಕೂತಿದೆ. ಇದರಿಂದ ಸ್ಥಳೀಯರಲ್ಲಿ ಮತ್ತೆ ಆತಂಕ ಮನೆ ಮಾಡಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವಿವಿಧ ಸಂಘಟನೆಯವರು ಸೇರಿ 18 ಗಂಟೆ ಕಾರ್ಯಾಚರಣೆ ನಡೆಸಿ ಕೋತಿಯನ್ನು ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟು ಬಂದಿದ್ದರು, ಕೋತಿ ಮತ್ತೆ ಗೊಬ್ಬರದ ಲಾರಿ ಏರಿ ಮತ್ತೆ ಕೊಟ್ಟಿಗೆಹಾರಕ್ಕೆ ಬಂದಿದೆ. ಇದನ್ನು ಕಂಡ ಸಾರ್ವಜನಿಕರು ಮತ್ತೆ ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಮತ್ತೆ ಕೋತಿಯನ್ನು ಸೆರೆ ಹಿಡಿಯಲು ಮುಂದಾಗಿದ್ದಾರೆ.