ಮಲಪ್ಪುರಂ: ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅಪ್ರಾಪ್ತೆಯೊಬ್ಬಳನ್ನು ಅದೇ ಸಮುದಾಯದ 25 ವರ್ಷದ ಯುವಕನಿಗೆ ಮದುವೆ ಮಾಡಿಕೊಟ್ಟ ಘಟನೆ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.
ಇದೊಂದು ಬಾಲ್ಯ ವಿವಾಹ ಅಪರಾಧವಾಗಿದ್ದು, ಈ ಸಂಬಂಧ ಪೋಷಕರ ಮತ್ತು ಮದುವೆ ಆಯೋಜಿಸಿದವರ ಹಾಗೂ ಯುವಕನ ವಿರುದ್ಧ ಕೇಸ್ ದಾಖಲಿಸಲಾಗಿದೆ. ಮಲಪ್ಪುರಂ ಜಿಲ್ಲೆಯ ಕರುವರಕುಂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಡಿಯೊಗ್ರಾಫರ್, ಅಡುಗೆ ತಯಾರಿಸಿದವರು, ಅತಿಥಿಗಳನ್ನು ಕೂಡ ಬಾಲ್ಯ ವಿವಾಹ ನಿಷೇಧ ಕಾಯಿದೆ ಅಡಿಯಲ್ಲಿ ಬುಕ್ ಮಾಡಲು ಚಿಂತನೆ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಪರಾಯಟ್ಟಾ ತಿಳಿಸಿದ್ದಾರೆ.
ಒಂದು ವಾರದ ಹಿಂದೆಯೇ ಗೌಪ್ಯವಾಗಿ ಮದುವೆ ಮಾಡಲಾಗಿದ್ದರೂ, ಸುಳಿವು ಸಿಕ್ಕ ಕೂಡಲೇ ಬಾಲಕಿಯ ರಕ್ಷಣಾ ಕಾರ್ಯಾಚರಣೆಯನ್ನು ಪೊಲೀಸರು ನಡೆಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕಾನೂನು ಪ್ರಕಾರ ಬಾಲ್ಯ ವಿವಾಹ ಅಪರಾಧಕ್ಕೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಜತೆಗೆ ಗರಿಷ್ಠ 10 ಲಕ್ಷ ರೂ. ದಂಡ ಕೂಡ ಕೋರ್ಟ್ ವಿಧಿಸಬಹುದಾಗಿದೆ.