ಬೆಂಗಳೂರು: ಯುವತಿಯರ ಸೋಗಿನಲ್ಲಿ ನಕಲಿ ಖಾತೆ ತೆರೆದು ಸಾವಿರಾರು ಜನರಿಗೆ ಬ್ಲ್ಯಾಕ್ ಮೇಲ್ ಮಾಡಿ ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್ CID ಬಲೆಗೆ ಬಿದ್ದಿದೆ. ಪ್ರಕರಣದ ಬೆನ್ನತ್ತಿದ್ದ ಸಿಐಡಿ ಅಧಿಕಾರಿಗಳು ಹರಿಯಾಣದಲ್ಲಿ ಮೊಹಮ್ಮದ್ ಮುಜಾಹಿದ್, ಮೊಹಮ್ಮದ್ ಇಕ್ಬಾಲ್, ಆಸೀಫ್ ಎಂಬ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ.
ಈ ಆರೋಪಿಗಳು ಮಹಿಳೆಯರ ಹೆಸರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಳ್ಳುತ್ತಿದ್ದರು. ತೀರಾ ಆಪ್ತರನ್ನಾಗಿ ಮಾಡಿಕೊಂಡು ನಂತರ ಅಸಲಿ ಆಟ ಶುರು ಮಾಡುತ್ತಿದ್ದರು.
ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು ಎನ್ನಲಾಗಿದೆ. ಕೇಸ್ನ ಪ್ರಮುಖ ಆರೋಪಿ ಮುಜಾಹಿದ್ ಎಂಬಾತ 5,000ಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳು ಮತ್ತು ಡಿಜಿಟಲ್ ವ್ಯಾಲೆಟ್‌ಗಳನ್ನು ಸಕ್ರಿಯಗೊಳಿಸಿ ನಕಲಿ ದಾಖಲೆ ಒದಗಿಸಿ ಸಿಮ್‌ಕಾರ್ಡ್ ಪಾಯಿಂಟ್ ಆಫ್ ಸೇಲ್ ಏಜೆನ್ಸಿಯನ್ನು ಕೂಡ ಪಡೆದುಕೊಂಡಿದ್ದ ಎಂದು ಆರೋಪಿಸಲಾಗಿದೆ.
5,000ಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳು ಮತ್ತು ಡಿಜಿಟಲ್ ವ್ಯಾಲೆಟ್‌ಗಳನ್ನು ಸಕ್ರಿಯಗೊಳಿಸಿದ್ದ ಮುಜಾಹಿದ್ ಮೊಬೈಲ್ ಮತ್ತು ಇ-ವ್ಯಾಲೆಟ್ ಸೇವೆಗಳ ಲೋಪದೋಷಗಳನ್ನು ದುರ್ಬಳಕೆ ಮಾಡಿಕೊಂಡು ಫೋಟೋಗಳ ಮೂಲಕ ನಕಲಿ ದಾಖಲಾತಿಗಳನ್ನು ಸೃಷ್ಟಿಮಾಡ್ತಿದ್ದ ಎನ್ನಲಾಗಿದೆ. ಈತನಿಗೆ ಆಸಿಫ್ ಎಂಬ ಇನ್ನೋರ್ವ ಆರೋಪಿ ಸಬ್ ಎಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಆರೋಪಿಗಳು ದೇಶಾದ್ಯಂತ 3,951 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಅಧಿಕಾರಿಗಳಿಗೆ ಲಭ್ಯವಾಗಿದೆ.