ಮಂಗಳೂರು: ದ.ಕ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವ ಕಾರಣ ಕೇರಳದ ಗಡಿಭಾಗಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕು ಪ್ರದೇಶಗಳ 5 ಕಿ.ಮೀ. ವ್ಯಾಪ್ತಿಯಲ್ಲಿನ 19 ಗ್ರಾಮಗಳ ಮದ್ಯದಂಗಡಿಗಳಿಗೆ ಇದೇ ಸೆ.21ರಿಂದ ಮುಂದಿನ ಆದೇಶದವರೆಗೆ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರಗೆ ಕೆಲವು ಷರತ್ತುಗಳನ್ನು ಕಡ್ಡಾಯ ವಾಗಿ ಪಾಲಿಸಿ ವ್ಯವಹಾರ ನಡೆಸಲು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಆದೇಶ ಹೊರಡಿಸಿದ್ದಾರೆ.
ಮದ್ಯ ಮಾರಾಟ ಮಳಿಗೆಯಲ್ಲಿನ ನೌಕರರು ಹಾಗೂ ಮದ್ಯಖರೀದಿಗೆ ಬರುವ ಗ್ರಾಹಕರುಗಳು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು. ಮದ್ಯದಂಗಡಿ ಸ್ಥಳದಲ್ಲಿ ಸ್ಯಾನಿಟೈಸರ್ ಇಡಲು ವ್ಯವಸ್ಥೆ ಮಾಡುವುದರೊಂದಿಗೆ ಗ್ರಾಹಕರು ಕಡ್ಡಾಯ ವಾಗಿ ಸ್ಯಾನಿಟೈಸರ್ ಬಳಸುವಂತೆ ನೋಡಿಕೊಳ್ಳುವುದು ಹಾಗೂ ಈ ಬಗ್ಗೆ ಸೂಚನಾ ಫಲಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಮದ್ಯದಂಗಡಿ ಮಳಿಗೆಯ ಅಸುಪಾಸುಗಳಲ್ಲಿ ಸಾರ್ವಜನಿಕರು ಗುಂಪುಗೂಡದಂತೆ ಕ್ರಮ ವಹಿಸುವುದು. ಕೇರಳ ರಾಜ್ಯದ ಗಡಿಭಾಗಗಳಿಂದ ಆರ್‌ಟಿಪಿಸಿಆರ್ ವರದಿಯಿಲ್ಲದೇ ಸಕಾರಣವಿಲ್ಲದೇ ಅಕ್ರಮವಾಗಿ ಕೇರಳ ರಾಜ್ಯದ ವಾಸಿಗಳು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸಿ, ಬಾರು/ಮದ್ಯ ಮಾರಾಟ ಮಳಿಗೆಗಳಲ್ಲಿ ಮದ್ಯ ಸೇವಿಸುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಆದೇಶ ತಿಳಿಸಿದ್ದಾರೆ.