ಮಂಗಳೂರು: ಮೈಸೂರು ದೇವಸ್ಥಾನ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೊಲೆ ಬೆದರಿಕೆ ಹಾಕಿದ ಆರೋಪದಲ್ಲಿ ಹಿಂದೂ ಮಹಾಸಭಾ ಮುಖಂಡ ಧರ್ಮೇಂದ್ರ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಿವಾಸಿ ಡಾ. ಲೋಹಿತ್ ಕುಮಾರ್ ಸುವರ್ಣ ಕೇಸು ದಾಖಲಿಸಿದ್ದಾರೆ. ನಗರದ ಖಾಸಗಿ ಹೊಟೇಲ್‌ನಲ್ಲಿ ಶನಿವಾರ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಮುಖಂಡ ಧರ್ಮೇಂದ್ರ ವಿವಾದಾತ್ಮಕ ಹೇಳಿಕೆ ನೀಡಿದ್ದರು. ”ನಾವು ಗಾಂಧೀಜಿಯನ್ನೆ ಬಿಟ್ಟಿಲ್ಲ, ನೀವು ಯಾವ ಲೆಕ್ಕ ನಮಗೆ” ಎನ್ನುವ ಮೂಲಕ ವಿವಾದವನ್ನು ತಮ್ಮ ಮೇಲೆ ಎಳೆದುಕೊಂಡಿದ್ದರು. ಅಲ್ಲದೆ, ಪರೋಕ್ಷವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೊಲೆ ಬೆದರಿಕೆಯನ್ನೂ ಹಾಕಿದ್ದರು ಎಂದು ದೂರಲಾಗಿದೆ.
”ಮೈಸೂರಿನಲ್ಲಿ ದೇಗುಲವನ್ನು ಧ್ವಂಸ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅನೇಕ ಧಾರ್ಮಿಕ ಕೇಂದ್ರಗಳ ಪಟ್ಟಿ ರೆಡಿ ಮಾಡಲಾಗಿದೆ. ಆದರೆ ಇತಿಹಾಸದಲ್ಲಿ ಒಂದೇ ಒಂದು ಮಸೀದಿ, ಚರ್ಚ್ ಒಡೆದದ್ದನ್ನು ತೋರಿಸಲಿ. ಅದ್ಯಾಕೆ ದೇವಸ್ಥಾನಗಳೇ ಟಾರ್ಗೆಟ್ ಆಗುತ್ತಿವೆ. ನಾವೇನು ಸುಮ್ಮನೇ ಕೂತಿದ್ದೀವೆ ಎಂದು ಭಾವಿಸಿದ್ದೀರಾ’ ಎಂದು ಧರ್ಮೇಂದ್ರ ಪ್ರಶ್ನಿಸಿದ್ದರು.