ನವದೆಹಲಿ: ಇಂದು ವಿಶ್ವದಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಿರುವುದು ಶಾಂತಿ ಮತ್ತು ಸುರಕ್ಷೆ. ಇದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ. ಸದ್ಯ ನಮ್ಮ ಕಣ್ಣಮುಂದೆ ಅಫ್ಘಾನಿಸ್ತಾನದಲ್ಲಿ ಆಗುತ್ತಿರುವ ಬೆಳವಣಿಗೆ ಇದೆ. ಅಲ್ಲಿ ಶಾಂತಿ, ನೆಮ್ಮದಿಯನ್ನು ಪುನರ್‌ಸ್ಥಾಪಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ನಿರ್ವಹಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಶಾಂಘೈ ಸಹಕಾರ ಸಂಘಟನೆಯ (SCO) 21ನೇ ಶೃಂಗಸಭೆ ತಜಕಿಸ್ತಾನದ ರಾಜಧಾನಿ ದುಶಾಂಬೆಯಲ್ಲಿ ನಡೆಯುತ್ತಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ ಪ್ರಧಾನಿ ಮಾತನಾಡಿದರು. ಈ ಬಾರಿ ಎಸ್‌ಇಒ ಸಂಘಟನೆಗೆ ಹೊಸದಾಗಿ ಇರಾನ್ ಬಂದಿರುವುದು ಸ್ವಾಗತಾರ್ಹ ವಿಷಯವಾಗಿದೆ. ಇದರ ಪಾರ್ಟನ್ ಆಗಿ ಸೌದಿ ಅರೇಬಿಯಾ, ಈಜಿಪ್ಟ್ ಮತ್ತು ಕತಾರ್ ಕೂಡ ಸೇರಿಕೊಂಡಿದೆ. ಈ ಎಲ್ಲಾ ಹೊಸ ಸದಸ್ಯರಿಗೆ ನಾನು ಸ್ವಾಗತಿಸುತ್ತೇನೆ ಎಂದ ಮೋದಿ ವಿಶ್ವದಲ್ಲಿ ಶಾಂತಿ ಕಾಪಾಡುವ ಬಗ್ಗೆ ಎಲ್ಲರೂ ಕೈಜೋಡಿಸಬೇಕಿದೆ ಎಂದು ಹೇಳಿದರು.