ಬೆಂಗಳೂರು: ಎಡಿಜಿಪಿ ಭಾಸ್ಕರ್ ರಾವ್ ಸ್ವಯಂ ನಿವೃತ್ತಿ ಅರ್ಜಿಗೆ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ರಿಂದ ಒಪ್ಪಿಗೆ ಸಿಕ್ಕಿದೆ.
ಭಾಸ್ಕರ್ ರಾವ್ ಸ್ವಯಂ ನಿವೃತ್ತಿ ಅರ್ಜಿಗೆ ಡಿಜಿ, ಐಜಿಪಿ ಒಪ್ಪಿಗೆ ಸೂಚಿಸಿದ್ದಾರೆ. ಕ್ಲಿಯರೆನ್ಸ್ ನೀಡಿ ರಾಜ್ಯ ಸರ್ಕಾರಕ್ಕೆ ಕಡತ ರವಾನೆ ಮಾಡಲಾಗಿದೆ. ಸರ್ಕಾರದ ಗೃಹ ಇಲಾಖೆಗೆ ಕಡತ ರವಾನಿಸಲಾಗಿದೆ. ಇನ್ನು ರಾಜ್ಯ ಸರ್ಕಾರದ ಮಟ್ಟದಲ್ಲಿ ಒಪ್ಪಿಗೆ ಸೂಚಿಸುವುದು ಬಾಕಿ ಇದೆ.
ಎಡಿಜಿಪಿ ಭಾಸ್ಕರ್ ರಾವ್ ಅವರು ಸೇವೆಯಿಂದ ಸ್ವಯಂ ನಿವೃತ್ತಿ ಆಶಿಸಿ ಕರ್ನಾಟಕ ಸರ್ಕಾರಕ್ಕೆ ಅರ್ಜಿ ಸಲ್ಲಿಸಿರುವುದು ಈ ಮೊದಲು ತಿಳಿದುಬಂದಿತ್ತು. ನಿವೃತ್ತಿಗೆ ಇನ್ನೂ ಮೂರು ವರ್ಷ ಬಾಕಿ ಇರುವಾಗಲೆ ಭಾಸ್ಕರ್ ರಾವ್ ಅವರು ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಥಶಾಸ್ತ್ರ ವಿಷಯದಲ್ಲಿ ಎಂ.ಎ ಪದವಿ ಪಡೆದಿರುವ ಭಾಸ್ಕರ್ ರಾವ್, 1990ನೇ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಆಗಿದ್ದಾರೆ. ಬೆಂಗಳೂರು ಪೊಲೀಸ್ ಕಮಿಷನರ್ ಆಗಿಯೂ ಅವರು ಕೆಲಸ ಮಾಡಿದ್ದಾರೆ. ಸದ್ಯ ರೈಲ್ವೇ ಪೊಲೀಸ್ ವಿಭಾಗದ ಎಡಿಜಿಪಿ ಆಗಿದ್ದಾರೆ.
ನಿವೃತ್ತಿಗೆ 3 ವರ್ಷ ಬಾಕಿ ಇರುವಾಗಲೇ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿರುವ ಭಾಸ್ಕರ್ ರಾವ್ ಸ್ವಯಂ ನಿವೃತ್ತಿಗೆ ವೈಯಕ್ತಿಕ ಕಾರಣ ನೀಡಿದ್ದರು. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿ, ಐಜಿಪಿಗೆ ರಾಜೀನಾಮೆ ಪತ್ರ ಬರೆದಿದ್ದರು. ಭಾಸ್ಕರ್ ರಾವ್ ಮನವಿಗೆ ಸರ್ಕಾರ ಒಪ್ಪಿಗೆ ನೀಡಬೇಕು. ಅಲ್ಲಿಯವರೆಗೆ ಭಾಸ್ಕರ್ ರಾವ್ ಅವರು ಎಡಿಜಿಪಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.