ಬೆಂಗಳೂರು : ರೈಲ್ವೆ ಪೊಲೀಸ್ ವಿಭಾಗದ ಎಡಿಜಿಪಿ ಆಗಿರುವ ಭಾಸ್ಕರ್ ರಾವ್ ಅವರು ಸೇವೆಯಿಂದ ಸ್ವಯಂ ನಿವೃತ್ತಿ ಬಯಸಿ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದಾರೆ.
ಭಾಸ್ಕರ ರಾವ್ ಅವರು, ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ತಾನು ಸ್ವಯಂನಿವೃತ್ತಿ ಪಡೆಯುತ್ತಿದ್ದೇನೆ. ಈ ಸಂಬಂಧ ನನ್ನ ಕೋರಿಕೆಯನ್ನು ಪರಿಗಣಿಸಬೇಕು ಎಂದು ಕೋರಿರುವ ಪತ್ರವನ್ನು ರಾಜ್ಯ ಸರಕಾರಕ್ಕೆ ನೀಡಿರುವುದಾಗಿ ಹೇಳಲಾಗುತ್ತಿದೆ.
ಸ್ವಯಂ ನಿವೃತ್ತಿ ಪಡೆದ ಬಳಿಕ ಭಾಸ್ಕರ್ ರಾವ್ ಅವರು ರಾಜಕೀಯ ಪ್ರವೇಶಿಸಲಿದ್ದಾರೆ ಎನ್ನಲಾಗುತ್ತಿದೆ. ರಾಜಕೀಯ ಪ್ರವೇಶದ ಬಳಿಕ ಬಸವನಗುಡಿ ಅಥವಾ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಅರ್ಥಶಾಸ್ತ್ರ ವಿಷಯದಲ್ಲಿ ಎಂ.ಎ. ಪದವಿ ಪಡೆದಿರುವ ಭಾಸ್ಕರ್ ರಾವ್ ಅವರು, 1990ನೇ ಐಪಿಎಸ್ ಬ್ಯಾಚ್ ಅಧಿಕಾರಿ. ಬೆಂಗಳೂರು ಪೊಲೀಸ್ ಕಮಿಷನರ್ ಆಗಿಯೂ ಕೆಲಸ ಮಾಡಿದ್ದರು. ಆದರೆ, ರಾಜಕೀಯ ಸೇರುತ್ತಾರೆಯೇ, ಮೂರು ವರ್ಷಗಳ ಸೇವಾವಧಿ ಮುಗಿಯೋದಕ್ಕೂ ಮುನ್ನ ಯಾವ ಕಾರಣಕ್ಕೆ ನಿವೃತ್ತಿಗೆ ಮುಂದಾಗಿದ್ದಾರೆ ಎನ್ನುವುದು ದೃಢವಾಗಿಲ್ಲ.