Ad Widget .

ಇಂಜಿನಿಯರ್ ಪದಕ್ಕೆ ಬೇರೆಯದ್ದೇ‌ ರೂಪು ನೀಡಿದ್ದರವರು…! ಸರ್.ಎಂ.ವಿ ಎಂಬ ಆಧುನಿಕ‌ ಶಿಲ್ಪಿ

ಸೆ.15 ಇಂಜಿನಿಯರ್ಸ್ ಡೇ, ಕರ್ನಾಟಕದ ಮೊದಲ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ನವರ ಜನ್ಮದಿನದ ಪ್ರಯುಕ್ತ ಎಲ್ಲೆಡೆ ಇಂಜಿನಿಯರ್ ದಿನವೆಂದು ಆಚರಿಸಲಾಗುತ್ತದೆ.

Ad Widget . Ad Widget .

‘ಭಾರತ ರತ್ನ’ ಮತ್ತು ‘ಸರ್’ ಬಿರುದುಗಳ ಹಿಂದಿರುವ ಎಂ ವಿಶ್ವೇಶ್ವರಯ್ಯನವರ ಶ್ರಮ.
ಸರ್ ಎಂ ವಿಶ್ವೇಶ್ವರಯ್ಯ ಕೇವಲ ಇಂಜಿನಿಯರ್ ಆಗಿ ಉಳಿದಿರಲಿಲ್ಲ. ಅವರೊಬ್ಬ ಮಹಾನ್ ಮೇಧಾವಿ ಮತ್ತು ಉತ್ತಮ ಆಡಳಿತಗಾರರು. ಯಾವುದೇ ಕೆಲಸವಾಗಲಿ ಅದನ್ನು ಹೇಗೆ ಮಾಡಬೇಕು ಮತ್ತು ಹೇಗೆ ಮಾಡಿಸಬೇಕು ಎಂಬುದನ್ನು ಚೆನ್ನಾಗಿ ತಿಳಿದಿದ್ದರು. ಆ ಕಾರಣದಿಂದಲೇ ಅವರು ಅಷ್ಟೆಲ್ಲ ಸಾಧನೆ ಮಾಡಲು ಸಾಧ್ಯವಾಗಿದ್ದು.

Ad Widget . Ad Widget .

ಇಂಜಿನಿಯರಿಂಗ್ ಪದಕ್ಕೆ ಬೇರೆಯದ್ದೇ ರೂಪ ನೀಡಿದ ವಿಶ್ವೇಶ್ವರಯ್ಯ ನಾಡಿನ ಏಳಿಗೆಗಾಗಿ ಶ್ರಮಿಸಿದವರು. ಸ್ವಾತಂತ್ರ್ಯ ಪೂರ್ವದಲ್ಲೇ ನವ ಭಾರತದ ಕನಸನ್ನು ಕಂಡಿದ್ದ ಸರ್ ಎಂ ವಿ ರವರು ಅದಕ್ಕಾಗಿ ಅನೇಕ ಯೋಜನೆಗಳನ್ನು ತಂದರು. ಕೃಷಿ, ಶಿಕ್ಷಣ, ಆರ್ಥಿಕ ವ್ಯವಸ್ಥೆ, ಕೈಗಾರಿಗೆ ಹೀಗೆ ಒಂದು ನಾಡು ಎಲ್ಲಾ ವಿಭಾಗದಲ್ಲೂ ಅಭಿವೃದ್ಧಿ ಹೊಂದಲು ಬೇಕಾದ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ವಿಶ್ವೇಶ್ವರಯ್ಯನವರ ಪಾತ್ರ ದೊಡ್ಡದು.

ಅವರ ಸಾಧನೆ ಒಂದೆರೆಡಲ್ಲ ಕನ್ನಂಬಾಡಿ ಕಟ್ಟೆ, ಹಿಂದೂಸ್ಥಾನ್ ಏರ್‌ಕ್ರಾಫ್ಟ್ ಫ್ಯಾಕ್ಟರಿ(ಈಗ ಎಚ್‌ಎಎಲ್), ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಸರಕಾರಿ ಸಾಬೂನು ಕಾರ್ಖಾನೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕನ್ನಡ ಸಾಹಿತ್ಯ ಪರಿಷತ್, ಮೈಸೂರು ವಿವಿ, ಶಿವನಸಮುದ್ರ, ಜೋಗದ ಜಲವಿದ್ಯುತ್ ಯೋಜನೆ, ಬ್ಲಾಕ್ ಸಿಸ್ಟಮ್(ನೀರಾವರಿ ಯೋಜನೆ), ಪ್ಯಾರಾಸಿಟಾಯ್ಡ್ಸ್ ಲ್ಯಾಬೋ ರೇಟರಿ, ಮೈಸೂರು ಸಕ್ಕರೆ ಕಾರ್ಖಾನೆ, ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆ ಹೀಗೆ ದೊಡ್ಡ ಪಟ್ಟಿಯೇ ಇದೆ.

ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ, ಹೊರ ರಾಜ್ಯ ಮತ್ತು ಹೊರ ದೇಶಗಳಿಗೂ ಅವರ ಸಾಧನೆ ವಿಸ್ತರಿಸಿದೆ. ಗ್ವಾಲಿಯರ್‌ನ ಟೈಗರ್ ಡ್ಯಾಂ, ಪುಣೆಯ ಖಡಕ್‌ವಾಸ್ಲಾ ಜಲಾಶಯ ಹಾಗೂ ಒರಿಸ್ಸಾದ ಮಹಾನದಿ ಪ್ರವಾಹ ನಿಯಂತ್ರಣ ಯೋಜನೆ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿದ ಮಹಾನ್ ಮೇಧಾವಿ.

ನಾವಿಲ್ಲಿ ಗಮನಿಸಬೇಕಾದ ಅಂಶವೆಂದರೆ ಅವರು ಕೈಗೊಂಡ ಎಲ್ಲಾ ಯೋಜನೆಗಳು ಕೂಡ ಯಶಸ್ವಿಯಾಗಿವೆ. ಅಲ್ಲದೆ ತಾವೇ ಸ್ವತಃ ಮುಂದೆ ನಿಂತು ಎಲ್ಲದರ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಇಂದು ಎಷ್ಟು ಜನಕ್ಕೆ ಈ ರೀತಿಯ ಕಾರ್ಯ ದಕ್ಷತೆ ಇದೆ ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಅಲ್ಲದೇ ಎಷ್ಟು ಇಂಜಿನಿಯರ್ ಗಳಿಗೆ ದೇಶದ ಬಗ್ಗೆ ಕಾಳಜಿವಹಿಸುವ ಮನಸ್ಸಿದೆ.

ಪಿಯುಸಿ ನಂತರ ಸಿಇಟಿ ಬರೆದು ಪ್ರತಿಷ್ಠೆಗಾಗಿ ಬಿಇ ಮುಗಿಸಿ, ಯಾವುದೋ ಒಂದು ಕೆಲಸ ಹಿಡಿದು, ವಿದೇಶಗಳಿಗೆ ಹಾರುವ ಇಂಜಿನಿಯರ್ ಗಳಿಗೂ ಸರ್ ಎಂ ವಿ ಅವರಿಗೂ ಆಕಾಶ-ಪಾತಾಳಕ್ಕೆ ಇರುವ ಅಂತರ.

ನಮ್ಮ ದೇಶದ ಇಂಜಿನಿಯರಿಂಗ್ ಕಾಲೇಜುಗಳು ವಿಶ್ವೇಶ್ವರಯ್ಯನವರ ಆದರ್ಶವಿರುವ, ನಾಡಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಸುವ, ಸಮಾಜವನ್ನು ಸರಿಯಾದ ದಿಕ್ಕಿನಲ್ಲಿ ಸಾಗುವಂತೆ ಯೋಜನೆ ರೂಪಿಸುವ ಇಂಜಿನಿಯರ್ ಗಳನ್ನು ರೂಪಿಸಿದರೆ ಇಂಜಿನಿಯರ್ ದಿನಕ್ಕೆ ಮತ್ತು ಸರ್ ಎಂ ವಿಶ್ವೇಶ್ಚರಯ್ಯರಿಗೆ ನಿಜವಾದ ಗೌರವ ಸಲ್ಲುತ್ತದೆ.

Leave a Comment

Your email address will not be published. Required fields are marked *