ಉಳ್ಳಾಲ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಸಾಮಾಜಿಕ ಕಾರ್ಯಕರ್ತ ಸೇರಿದಂತೆ ಸಾರ್ವಜನಿಕರು ಹಿಡಿದು ಉಳ್ಳಾಲ ಠಾಣಾ ಪೊಲೀಸರ ವಶಕ್ಕೆ ಒಪ್ಪಿಸಿದ್ದು, ಆರೋಪಿ ವಿರುದ್ಧ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.
ಮೂಲತ: ಬೆಂಗಳೂರು ಕಲಾಸಿಪಾಳ್ಯ ನಿವಾಸಿ ಸದ್ಯ ಕಲ್ಕಟ್ಟದಲ್ಲಿ ವಾಸಿಸುವ ಆರೀಫ್ ಪಾಷಾ(30) ಬಂಧಿತ. ಆರೋಪಿ ಕೂಲಿ ಕಾರ್ಮಿಕನಾಗಿದ್ದಾನೆ. ತಿನ್ನಲು ಮಾಂಸ ಕೊಡಿಸುವುದಾಗಿ ನಂಬಿಸಿ ಬಾಲಕಿ ತಂದೆಗೆ ಪರಿಚಿತನಾಗಿರುವ ಆರೋಪಿ, ಮನೆಯಿಂದಲೇ ಕರೆತಂದು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈತನ ಕೃತ್ಯದಿಂದ ಗಾಬರಿಗೊಂಡ ಬಾಲಕಿ ಓಡಿ ತಪ್ಪಿಸುವ ಸಂದರ್ಭ ಅದೇ ದಾರಿಯಲ್ಲಿ ಬರುತ್ತಿದ್ದ ಸಾಮಾಜಿಕ ಕಾರ್ಯಕರ್ತ ತಲಪಾಡಿಯ ಯಶು ಪಕಳ ದಂಪತಿ ಬೈಕ್ ನಿಲ್ಲಿಸಿ’ ಕಾಪಾಡಿ ಕಾಪಾಡಿ’ ಅನ್ನುತ್ತಿದ್ದ ಬಾಲಕಿಯನ್ನು ಪ್ರಶ್ನಿಸಿದ್ದರು. ಈ ವೇಳೆ ನಡೆದ ಕೃತ್ಯವನ್ನು ಬಾಲಕಿ ತಿಳಿಸುತ್ತಿದ್ದಂತೆ, ಸ್ಥಳೀಯರಿಗೆ ಮಾಹಿತಿ ನೀಡಿದ ಸಾಮಾಜಿಕ ಕಾರ್ಯಕರ್ತ ಅವರ ಸಹಕಾರದೊಂದಿಗೆ ಆರೋಪಿ ಆರೀಫ್ ಪಾಷಾ ನನ್ನು ಹಿಡಿದಿದ್ದಾರೆ. ಬಳಿಕ ಉಳ್ಳಾಲ ಠಾಣಾ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಲಾಗಿದೆ.