ಗುಜರಾತ್ ನ ನೂತನ ಸಿಎಂ ಆಗಿ ಭೂಪೇಂದ್ರ ಪಟೇಲ್ ಅವರು ಆಯ್ಕೆಯಾಗಿದ್ದಾರೆ. ನೂತನ ಸಿಎಂ ಆಯ್ಕೆ ಸಂಬಂಧ ಇಂದು ನಡೆದ ಬಿಎಲ್ ಪಿ ಸಭೆಯಲ್ಲಿ ಭೂಪೇಂದ್ರ ಪಟೇಲ್ ಅವರನ್ನು ಸಿಎಂ ಆಗಿ ಆಯ್ಕೆ ಮಾಡಲಾಗಿದೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಜೆಪಿ ವೀಕ್ಷಕರು ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ನರೇಂದ್ರ ಸಿಂಗ್ ತೋಮರ್ ನೂತನ ಸಿಎಂ ಆಯ್ಕೆಯನ್ನು ಘೋಷಿಸಿದರು.
ಬಿಎಲ್ ಪಿ ಸಭೆಯಲ್ಲಿ ವಿಜಯ್ ರೂಪಾನಿ ಅವರು ಸಿಎಂ ಆಗಿ ಯಾರನ್ನು ಆಯ್ಕೆ ಮಾಡಬೇಕೆಂಬ ಬಗ್ಗೆ ತಮ್ಮ ನಿಲುವು ಸೂಚಿಸಿದರು. ಆ ಬಳಿಕ ಇತರರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು. ಬಿಎಲ್ ಪಿ ಸಭೆಯ ನಂತರ ಬಿಜೆಪಿ ಹಿರಿಯ ನಾಯಕರು ಮಹತ್ವದ ಸಭೆ ನಡೆಸಿದರು. ಆ ಬಳಿಕ ನೂತನ ಸಿಎಂ ಹೆಸರನ್ನು ಪ್ರಕಟಿಸಲಾಯಿತು.
ನಿನ್ನೆ ದಿಡೀರ್ ರಾಜಕೀಯ ವಿದ್ಯಮಾನದಲ್ಲಿ ಸಿಎಂ ವಿಜಯ್ ರೂಪಾನಿ ರಾಜೀನಾಮೆ ನೀಡಿದ್ದರು. ಮುಂಬರುವ ವರ್ಷದ ಕೊನೆಯಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಸಿಎಂ ಬದಲಾವಣೆಗೆ ನಿರ್ಧರಿಸಿತ್ತು. ಗಾಂಧಿನಗರದ ಬಿಜೆಪಿ ಕಚೇರಿಯಲ್ಲಿ ಬಿಎಲ್ ಪಿ ಸಭೆಗೂ ಮೊದಲೇ ಕೋರ್ ಕಮಿಟಿ ಸಭೆ ನಡೆಯಿತು. ಬಳಿಕ ನಡೆದ ಬಿಎಲ್ ಪಿ ಸಭೆಯಲ್ಲಿ ಬಿಜೆಪಿ ವೀಕ್ಷಕರಾದ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ನರೇಂದ್ರ ಸಿಂಗ್ ತೋಮರ್ ಪಾಲ್ಗೊಂಡರು.
ಇನ್ನು ಕರ್ನಾಟಕದ ಮಾದರಿಯಲ್ಲೇ ಗುಜರಾತ್ ಸರ್ಕಾರದಲ್ಲೂ ಬದಲಾವಣೆ ಮಾಡುವ ಸಾಧ್ಯತೆ ಇದ್ದು, ಎರಡು ಡಿಸಿಎಂ ಹುದ್ದೆ ಸೃಷ್ಟಿಸುವ ನಿರೀಕ್ಷೆ ಇದೆ. ಇನ್ನು ಸಿಎಂ ಸ್ಥಾನಕ್ಕೆ ಡಿಸಿಎಂ ಆಗಿರುವ ನಿತಿನ್ ಪಟೇಲ್, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಪಟೇಲ್, ರಾಜ್ಯ ಸಚಿವ ಆರ್. ಸಿ.ಫಲ್ದು ಮತ್ತು ಬಿಜೆಪಿ ಗುಜರಾತ್ ರಾಜ್ಯ ಮುಖ್ಯಸ್ಥ ಸಿ.ಆರ್.ಪಾಟೀಲ್ ಅವರ ಹೆಸರು ಕೇಳಿಬಂದಿತ್ತು. ಇದೇ ವೇಳೆ, ಬಿಜೆಪಿ ಮತ್ತು ಆರ್ಎಸ್ಎಸ್ ವಲಯದಲ್ಲಿ ಗುಜರಾತ್ನ ಬಿಜೆಪಿ ಉಪಾಧ್ಯಕ್ಷ ಗೋರ್ಧನ್ ಜಡಾಫಿಯಾ ಮತ್ತು ಬಿಜೆಪಿ ರಾಜ್ಯಸಭಾ ಸದಸ್ಯ ಪರಶೋತ್ತಮ್ ರುಪಾಲಾ ಅವರ ಹೆಸರು ಪ್ರಸ್ತಾಪವಾಗಿತ್ತು.