ಮಂಗಳೂರು: ಮಹಿಳೆಯೊಬ್ಬರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ಆಗಂತುಕರು ಆಕೆಯ ಕುತ್ತಿಗೆಯಿಂದ ಸರ ಕಿತ್ತು ಪರಾರಿಯಾದ ಘಟನೆ ನಗರದ ಶಿವಭಾಗ್ ಬಳಿಯ ಆಗ್ನೆಸ್ ಕಾಲೇಜು ಮುಂಭಾಗದಲ್ಲಿ ನಡೆದಿದೆ.
ರಿಟ್ಸ್ ಕಾರಿನಲ್ಲಿ ಬಂದ ಮೂವರು ನಗರದ ಆಗ್ನೆಸ್ ಕಾಲೇಜಿನ ಎದುರುಗಡೆಯಿಂದ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟಿ ಆಕೆಯ ಕುತ್ತಿಗೆಯಿಂದ ಸರ ಕಿತ್ತು ಓಡಿದ್ದಾರೆ. ರಿಟ್ಸ್ ಕಾರಿನಿಂದ ಮೊದಲು ಮೂವರು ಇಳಿದಿದ್ದು ಇಬ್ಬರು ಬಾಗಿಲು ಹತ್ತಿರದಲ್ಲೇ ನಿಂತಿದ್ದರು. ಇನ್ನೊಬ್ಬಾತ ಮಹಿಳೆಯನ್ನು ಎಳೆದಾಡಿ ಸರ ಕೀಳಲು ಯತ್ನಿಸಿದ್ದಾನೆ.
ಸಾಧಾರಣ ವಯಸ್ಸಿನ ಮಹಿಳೆ ಯಾವುದೋ ಸಮಾರಂಭ ಮುಗಿಸಿ ತನ್ನಷ್ಟಕ್ಕೇ ನಡೆದುಕೊಂಡು ಹೋಗುತ್ತಿದ್ದರು. ಕೈಯಲ್ಲಿದ್ದ ಬ್ಯಾಗಿನಲ್ಲಿ ಏನೋ ಹುಡುಕಾಡುತ್ತಾ ಹೋಗುತ್ತಿದ್ದಾಗ ಆಗಂತುಕರು ಅಡ್ಡಗಟ್ಟಿದ್ದರು. ಮಹಿಳೆ ತನ್ನ ಸರ ಉಳಿಸಿಕೊಳ್ಳಲು ನೆಲದಲ್ಲಿ ಉರುಳಾಡಿದ್ದಾರೆ. ಆದರೂ ಆ ವ್ಯಕ್ತಿ ಬಿಡಲಿಲ್ಲ. ಯಾವಾಗ ಘಟನೆ ಆಗಿದ್ದು ಅನ್ನೋದು ಕನ್ಫರ್ಮ್ ಆಗಿಲ್ಲ. ಇದೇ ವೇಳೆ, ಸರ ಕಿತ್ತು ಓಡುವ ದೃಶ್ಯವನ್ನು ಬಸ್ ನಿಲ್ದಾಣದಲ್ಲಿ ನಿಂತು ಯಾರೋ ಒಬ್ಬರು ಶೂಟ್ ಮಾಡಿದ್ದಾರೆ. ವಿಡಿಯೋ ಈಗ ವೈರಲ್ ಆಗಿದೆ. ವಿಡಿಯೋದಲ್ಲಿ ರಿಡ್ಜ್ ಕಾರು ಸಾಗುತ್ತಿದ್ದಂತೆ ಬೇರೊಬ್ಬ ಯುವಕ ಮತ್ತು ಇನ್ನೊಬ್ಬ ಯುವತಿ ರಕ್ಷಣೆಗೆ ಬಂದಿದ್ದು ಕಾರಿನಲ್ಲಿ ಪರಾರಿಯಾದ ವ್ಯಕ್ತಿಯ ಮೇಲೆ ದಾಳಿಗೆ ಮುಂದಾಗಿದ್ದಾರೆ. ಅಷ್ಟರಲ್ಲಿ ಕಾರಿನಲ್ಲಿದ್ದವರು ಓಡಿ ತಪ್ಪಿಸಿಕೊಂಡಿದ್ದಾರೆ.
https://youtube.com/shorts/VaNNzfz7Jjw?feature=share
ಇಷ್ಟಕ್ಕೂ ಅಲ್ಲಿ ಆಗಿದ್ದೇನು !?
ವಿಡಿಯೋ ಪೊಲೀಸ್ ಗ್ರೂಪಿನಲ್ಲಿ ಬರುತ್ತಿದ್ದಂತೆ ಮಾಧ್ಯಮದ ವ್ಯಕ್ತಿಗಳು ನೋಡಿ ಹೌಹಾರಿದ್ದರು. ಹಾಡಹಗಲೇ ಸರ ಕಿತ್ತು ಓಡಿದ್ದು ಮಂಗಳೂರಿನಲ್ಲಿ ಇದೇ ಮೊದಲು ಎನ್ನುವ ನೆಲೆಯಲ್ಲಿ ಆತಂಕ ವ್ಯಕ್ತವಾಗಿತ್ತು. ಕೊನೆಗೆ ಈ ವಿಡಿಯೋ ಬಗ್ಗೆ ಮಾಹಿತಿ ಕೇಳಿದಾಗ, ಒಟ್ಟು ಘಟನೆ ಪೊಲೀಸರ ಕಡೆಯಿಂದಲೇ ಸಾರ್ವಜನಿಕರ ಎಚ್ಚರಿಕೆ ಸಲುವಾಗಿ ನಡೆಯುತ್ತಿರುವ ಅಣಕು ಕಾರ್ಯಾಚರಣೆ ಎನ್ನುವುದು ತಿಳಿದುಬಂದಿದೆ. ಕಳೆದ ಒಂದು ವಾರದಲ್ಲಿ ಮಂಗಳೂರಿನ ಉರ್ವಾ ಮತ್ತು ಕದ್ರಿ ಠಾಣೆ ವ್ಯಾಪ್ತಿಯಲ್ಲಿ ಸರಣಿಯಂತೆ ಸರಗಳ್ಳತನ ನಡೆದಿದ್ದು ಅಮಾಯಕ ಮಹಿಳೆಯರು ನಡೆದುಕೊಂಡು ಹೋಗುತ್ತಿದ್ದಾಗ ಬೈಕಿನಲ್ಲಿ ಬಂದವರು ಸರ ಕಿತ್ತು ಓಡಿದ ಘಟನೆ ನಡೆದಿತ್ತು. ಸರಕಳ್ಳರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿರುವಾಗಲೇ ಜನಜಾಗೃತಿಗೆ ಪೊಲೀಸರು ಈ ರೀತಿಯ ಪ್ರಹಸನ ಮಾಡುತ್ತಿದ್ದಾರೆ. ಈ ಮೂಲಕ ಒಬ್ಬಂಟಿ ಮಹಿಳೆಯರು ಬಂಗಾರ ಧರಿಸಿ ಹೋಗುವಾಗ ಜಾಗ್ರತೆ ವಹಿಸಬೇಕು ಎಂದು ಹೇಳುತ್ತಿದ್ದಾರೆ. ಅಲ್ಲದೆ, ಪೊಲೀಸರು ಈ ರೀತಿಯ ಘಟನೆ ಆದಾಗ ಯಾವ ರೀತಿ ಪತ್ತೆ ಕಾರ್ಯ ಮಾಡಬೇಕು ಎಂಬ ಬಗ್ಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡುತ್ತಿದ್ದಾರೆ.