ಮೈಸೂರು: ನೆರೆಯ ರಾಜ್ಯ ಕೇರಳದಲ್ಲಿ ಮಹಾಮಾರಿ ಕೋವಿಡ್ ಸೋಂಕು ಹರಡುವಿಕೆಯ ಹೆಚ್ಚಳ ಹಾಗೂ ನಿಫಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ಮೈಸೂರು- ಕೇರಳ ನಡುವೆ ವಾಹನಗಳ ಸಂಚಾರವನ್ನು ಅಕ್ಟೋಬರ್ ಅಂತ್ಯದವರೆಗೆ ನಿರ್ಬಂಧಿಸಲಾಗಿದೆ.
ಇದುವರೆಗೆ ಎರಡು ರಾಜ್ಯಗಳ ನಡುವೆ ವಿದ್ಯಾರ್ಥಿಗಳು ಹಾಗೂ ಉದ್ಯಮಿಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.
ಆದರೆ, ಸೆ.7ರಿಂದ ತುರ್ತು ಚಿಕಿತ್ಸಾ ವಾಹನ ಹಾಗೂ ಗೂಡ್ಸ್ ವಾಹನ ಹೊರತುಪಡಿಸಿ, ಬೇರೆ ಎಲ್ಲ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತಂತೆ ಮೈಸೂರಿನ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್. ಪ್ರಸಾದ್ ಮಾಧ್ಯಮಗಳೊಂದಿಗೆ ಮಾತನಾಡಿ, ಕೊರೊನಾ ಮೂರನೇ ಅಲೆ ಹಾಗೂ ನಿಫಾ ವೈರಸ್ ಹರಡುವ ಆತಂಕದಿಂದ ಸೆ.7ರಿಂದ ಮೈಸೂರು ಹಾಗೂ ಕೇರಳ ನಡುವೆ ಅಕ್ಟೋಬರ್ ತಿಂಗಳ ಅಂತ್ಯದವರೆಗೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಅಂಬ್ಯುಲೆನ್ಸ್ ಹಾಗೂ ಗೂಡ್ಸ್ ವಾಹನಗಳ ಸಂಚಾರಕಷ್ಟೇ ಅನುಮತಿ ಇದೆ ಎಂದು ತಿಳಿಸಿದರು.
ಮೈಸೂರಿನಿಂದ ಕೇರಳಕ್ಕೆ ಹೋಗಿರುವ ಹಾಗೂ ಕೇರಳದಿಂದ ಮೈಸೂರಿಗೆ ಬಂದಿರುವ ವಿದ್ಯಾರ್ಥಿಗಳು ಮತ್ತು ಉದ್ಯಮಿಗಳು ಅಲ್ಲಿಯೇ ವಾಸ್ತವ್ಯ ಮುಂದುವರೆಸಬೇಕು. ನಿಫಾ ವೈರಸ್ ಬಗ್ಗೆ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಗಡಿಯಲ್ಲಿರುವ ಬಾವಲಿ ಚೆಕ್‌ಪೋಸ್ಟ್ ಬಳಿ ಇರುವ ಗ್ರಾಮ ಹಾಗೂ ಹಾಡಿ ಜನರಿಗೆ ಕರಪತ್ರ ನೀಡುವ ಮೂಲಕ ಅರಿವು ಮೂಡಿಸಲಾಗುತ್ತಿದೆ. ಅಲ್ಲದೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ ಎಂದು ಹೇಳಿದರು.