ಹೈದರಾಬಾದ್: ಇಲ್ಲಿನ ಕೇಬಲ್ ಸೇತುವೆಯ ಮೇಲೆ ನಡೆದ ಅಪಘಾತದಲ್ಲಿ ತೆಲುಗು ಚಿತ್ರನಟ ಸಾಯಿ ಧರ್ಮ ತೇಜ್ ಅವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಹೈದರಾಬಾದ್‌ನ ಕೇಬಲ್ ಸೇತುವೆಯ ಮೇಲೆ ಸಾಯಿ ಧರ್ಮ ತೇಜ್ ವೇಗವಾಗಿ ಚಲಿಸುತ್ತಿದ್ದ ಬೈಕ್ ಸ್ಕಿಡ್ ಆಗಿದ್ದರಿಂದ ಈ ಅಪಘಾತ ಸಂಭವಿಸಿದೆ. ಸಾಯಿ ಧರ್ಮ ತೇಜ್ ಅವರು ಹೆಲ್ಮೆಟ್ ಧರಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಅಪಘಾತ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಜುಬಿಲಿ ಹಿಲ್ಸ್‌ನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾಯಿ ಧರ್ಮ ತೇಜ್ ಅವರನ್ನು ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಚಿರಂಜೀವಿ ಕುಟುಂಬದ ಸದಸ್ಯರಾಗಿರುವ ಸಾಯಿ ಧರ್ಮ ತೇಜ್ ಅವರ ಆರೋಗ್ಯ ಸ್ಥಿತಿಯನ್ನು ವಿಚಾರಿಸಲು ಚಿರಂಜೀವಿ, ಪವನ್‌ಕಲ್ಯಾಣ್, ವರುಣ್ ತೇಜ್ ಸೇರಿದಂತೆ ಹಲವರು ಅಪೋಲೊ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.