ಸುಳ್ಯ: ಮಹಿಳೆಯೋರ್ವಳು ತನ್ನ ಮಕ್ಕಳೊಂದಿಗೆ ಪರಿಚಿತ ಯುವಕನೊಂದಿಗೆ ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆ ಸೋಮವಾರ ಸಂಜೆ ಸುಳ್ಯ ಪೊಲೀಸ್ ಠಾಣೆಗೆ ಹಾಜರಾಗಿದ್ದು, ಪತಿಯೊಂದಿಗೆ ತೆರಳಲು ಅಸಮ್ಮತಿ ಸೂಚಿಸಿರುವುದಾಗಿ ತಿಳಿದುಬಂದಿದೆ.
ಸುಳ್ಯ ಜಯನಗರ ಕೊಯಿಂಗೋಡಿ ಸಮೀಪದ ನಿವಾಸಿ ಸಮಿತ್(ಸಂಧ್ಯಾ) ಎಂಬ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಸಂಬಂಧಿಕನೆಂದು ಮನೆಗೆ ಬರುತ್ತಿದ್ದ ಪ್ರದೀಪ್ ಎಂಬ ಯುವಕನೊಂದಿಗೆ ಪರಾರಿಯಾಗಿದ್ದಾಳೆಂದು ಆಕೆಯ ಪತಿ ಮನೋಜ್ ಸುಳ್ಯ ಠಾಣೆಗೆ ದೂರು ನೀಡಿದ ಹಿನ್ನಲೆಯಲ್ಲಿ ಸುಳ್ಯ ಠಾಣಾ ಉಪನಿರೀಕ್ಷಕ ಎಂ.ಆರ್.ಹರೀಶ್‌ರವರು ಪ್ರದೀಪ್ ಹಾಗೂ ಸಂದ್ಯಾಳನ್ನು ಠಾಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು.
ಆದರೆ ಸೋಮವಾರ ಸಂಜೆ ಆಕೆಯೊಬ್ಬಳೇ ಠಾಣೆಗೆ ಹಾಜರಾಗಿ ಪೊಲೀಸರ ಮುಂದೆ ನಾನು ಮುಂದೆ ಪ್ರದೀಪನೊಂದಿಗೆ ಬಾಳುವ ನಿರ್ಧಾರ ಹೊಂದಿದ್ದು, ಆತನೊಂದಿಗೆ ಇರುತ್ತೇನೆಂದು ಹೇಳಿಕೆ ನೀಡಿದ್ದಾಳೆ.
ಸಂದ್ಯಾ ಹಾಗೂ ಪ್ರದೀಪ್ ಠಾಣೆಗೆ ಬರುವ ವಿಷಯ ತಿಳಿದ ಪತಿ ಮನೋಜ್ ಹಾಗೂ ಆತನ ತಂದೆ ಹಾಗೂ ಭಾವ, ಸಂಧ್ಯಾರ ತಂದೆ ಇವರು ಠಾಣೆಗೆ ಮಾತುಕತೆಗೆಂದು ಬಂದಿದ್ದರು. ಆದರೆ ಇವರ ಮಾತನ್ನು ಕೇಳದ ಮಹಿಳೆ ನನಗೆ ನನ್ನ ಗಂಡ ಹೊಡೆಯುತ್ತಿದ್ದು, ಅವರೊಂದಿಗೆ ನಾನು ಬಾಳಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಹಾಕುವುದಾಗಿ ತಿಳಿಸಿ, ಅಲ್ಲಿಂದ ತೆರಳಿದ್ದಾಳೆ ಎನ್ನಲಾಗಿದೆ.
ಸಂಧ್ಯಾ ಸ್ವಸಹಾಯ ಸಂಘಗಳಿಂದ ಸಾಲ ಪಡೆದಿದ್ದು, ಸಾಲ ಪಡೆದಿರುವ ಗುಂಪಿನ ಸದಸ್ಯರುಗಳು ಠಾಣೆಗೆ ಬಂದು ಸಂಧ್ಯಾಳನ್ನು ಕಾಯುತ್ತಿದ್ದ ವೇಳೆ ಪೊಲೀಸರು ನಿಮ್ಮ ಹಣದ ವ್ಯವಹಾರಗಳನ್ನು ಹೊರಗಡೆ ಮುಗಿಸಿಕೊಳ್ಳಿ ಇಲ್ಲಿ ಯಾವುದೇ ರೀತಿಯ ಮಾತುಕತೆ ಮಾಡಬಾರದೆಂದು ಹೇಳಿದ ಹಿನ್ನಲೆಯಲ್ಲಿ ಸಂಧ್ಯಾರವರ ವಿಚಾರಣೆ ಮುಗಿದು ಹೊರಬರುವ ತನಕ ಕಾದ ಮಹಿಳಾ ಸದಸ್ಯರು 2 ಗಂಟೆಯ ಬಳಿಕ ಠಾಣೆಯಿಂದ ಹೊರ ಬಂದ ಸಂಧ್ಯಾರೊಂದಿಗೆ ಸಂಘದಿಂದ ಸಾಲ ಪಡೆದ ಹಣ ನೀಡುವ ಕುರಿತು ಮಾತಿನ ಚಕಮಕಿ ನಡೆಸಿರುವುದಾಗಿ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಆಕೆ ತಾನು ಕಚೇರಿಗೆ ಹೋಗಿ ಇದನ್ನು ಸರಿಮಾಡಿಕೊಡುವುದಾಗಿ ಹೇಳಿದ್ದಾಳೆನ್ನಲಾಗಿದೆ. ಈ ಎಲ್ಲಾ ಘಟನೆಯ ಬಳಿಕ ಠಾಣೆಗೆ ಬಂದಿದ್ದ ಮಹಿಳೆಯ ಗಂಡ ಮನೋಜ್ ಪ್ರದೀಪ್ ಮತ್ತು ಸಂದ್ಯಾ ನನ್ನ ಬಳಿ ಇದ್ದ ಹದಿನೈದು ಲಕ್ಷ ಹಾಗೂ ಚಿನ್ನಾಭರಣಗಳನ್ನು ಕೊಂಡೊಯ್ದಿದ್ದಾರೆ. ಆತ ಸಂಬಂಧಿಕನೆಂದು ಬಂದು ನನ್ನ ಸಂಸಾರವನ್ನೇ ಹಾಳು ಮಾಡಿದ್ದಾನೆ. ಈ ಕುರಿತು ನ್ಯಾಯಾಲಯದ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ.