ಉಡುಪಿ: ತಾಯಿ, ಹಿರಿಯರ ನೆನಪಿಗಾಗಿ ಕಾಪು ಗರಡಿ ರಸ್ತೆಯ ಬದಿಯಲ್ಲಿರುವ ನವದುರ್ಗಾ ಲಕ್ಷ್ಮೀ ನಿವಾಸ್ ಮನೆಯ ಆವರಣದಲ್ಲಿ ಮಗನೋರ್ವ ಗುಡಿಕಟ್ಟಿದ್ದು, ತಾಯಿಯ ಶ್ರೇಷ್ಟತೆಯನ್ನು ಲೋಕಕ್ಕೆ ಸಾರಿರುವ ವಿಶೇಷ ಕಾರ್ಯ ವೈರಲ್ ಆಗಿದೆ. ಶ್ರೀ ಬ್ರಹ್ಮ ಬೈದರ್ಕಳ ಪೊಯ್ಯ ಪೊಡಿಕಲ್ಲ ಗರೊಡಿಯ ಗರಡಿ ಮನೆಯ ಸದಸ್ಯರಾದ ಗೀತಾ ಯಾದವ್ ಪೂಜಾರಿ , ಅವರ ತಾಯಿ ಕಲ್ಯಾಣಿ ಬಾಯಿ ಪೂಜಾರಿ, ಮುತ್ತಜ್ಜಿ ಮುತ್ತಕ್ಕ ಬೈದಿ ಪೂಜಾರ್ತಿ ಅವರ ಮೂರ್ತಿಯನ್ನು ಕೆತ್ತಿಸಿ, ಗುಡಿಯೊಳಗೆ ಪ್ರತಿಷ್ಠಾಪನೆ ಮಾಡಿಸಿದ್ದಾರೆ.
ಮುಂಬೈ ಮಹಾನಗರದಲ್ಲಿ ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿದ್ದ ಗೀತಾ ಯಾದವ್ ಪೂಜಾರಿ ಅವರು, ಮುಂಬಯಿ ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಆಗಿ, ರಾಜಕೀಯದ ಜೊತೆಗೆ ವಿವಿಧ ಧಾರ್ಮಿಕ, ಶೈಕ್ಷಣಿಕ ಮತ್ತು ಸಮಾಜ ಸೇವಾ ಕಾರ್ಯಗಳಲ್ಲೂ ಮುಂಚೂಣಿಯಲ್ಲಿ ನಿಂತು ವಿವಿಧ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಇವರು ಮುಂಬೈ ತುಳುನಾಡ ಕನ್ನಡಿಗರ ಜೊತೆಗೂ ಉತ್ತಮ ಭಾಂದವ್ಯವನ್ನು ಹೊಂದಿದ್ದು ಕಾಪು ಪರಿಸರದಲ್ಲಿಯೂ ಸಮಾಜ ಸೇವಾ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಕೊರೊನಾ ಸಂದರ್ಭದಲ್ಲಿ ಜನತೆಯ ಪರವಾಗಿ ಅಪಾರ ಸೇವೆ ಸಲ್ಲಿಸಿದ್ದು, ಜನರಿಗೆ ಉಚಿತ ಆಂಬುಲೆನ್ಸ್, ಊಟ, ಮಾಸ್ಕ್, ಸ್ಯಾನಿಟೈಸರ್ ಸಹಿತವಾದ ವಿವಿಧ ಸೊತ್ತುಗಳನ್ನು ವಿತರಿಸಿದ್ದ ಅವರು ಕಳೆದ ವರ್ಷ ಸೆ. 3ರಂದು ಹೃದಯಾಘಾತದಿಂದಾಗಿ ನಿಧನ ಹೊಂದಿದ್ದರು.
ಗೀತಾ ಯಾದವ್, ಕಲ್ಯಾಣಿ ಪೂಜಾರ್ತಿ ಮತ್ತು ಮುತ್ತಕ್ಕ ಬೈದಿ ಪೂಜಾರ್ತಿ ಅವರ ನೆನಪಿನಲ್ಲಿ ನಿರ್ಮಿಸಲಾದ ಮಂದಿರವನ್ನು ಗೀತಾ ಯಾದವ್ ಅವರ ವರ್ಷಾಂತಿಕದ ದಿನವಾದ ಸೆ. 3 ರಂದು ಉದ್ಘಾಟಿಸಲಾಗಿದೆ. ಗುಡಿ ನಿರ್ಮಾಣ, ಪುತ್ಥಳಿ ರಚನೆ, ಮಂದಿರದ ಅನುಷ್ಟಾನದೊಳಗೆ ಮೂರ್ತಿ ಪ್ರತಿಷ್ಟಾಪನೆ ಸಹಿತವಾದ ಜೋಡಣಾ ಕಾರ್ಯಗಳಿಗೆ 27 ಲಕ್ಷ ರೂ. ಖರ್ಚಾಗಿದ್ದು, ತಾಯಿ, ಅಜ್ಜಿ ಮತ್ತು ಮುತ್ತಜ್ಜಿಯ ಪುತ್ಥಳಿಯನ್ನು ನಿರ್ಮಿಸಿ, ಮಂದಿರದೊಳಗೆ ಪ್ರತಿಷ್ಠಾಪಿಸಿ, ಕುಟುಂಬದ ಮೂರು ತಲೆಮಾರಿನ ಹಿರಿಯರ ನೆನಪನ್ನು ಶಾಶ್ವತವಾಗಿಸುವ ಪ್ರಯತ್ನ ಮಾಡಿದ್ದಾರೆ.