ಬೆಂಗಳೂರು: ಅಮೇರಿಕಾದಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ ಮಹಿಳೆಯೋರ್ವರನ್ನು ರಕ್ಷಿಸಲು ಹೋಗಿ ಕನ್ನಡಿಗನೊಬ್ಬ ಸಾವನಪ್ಪಿದ ಸುದ್ದಿಯನ್ನು ಅಮೇರಿಕಾದ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಚಿಕ್ಕಬಳ್ಳಾಪುರ, ಚಿಂತಾಮಣಿ ತಾಲೂಕಿನ ಬೊಮ್ಮೆಪಲ್ಲಿ ನಿವಾಸಿ ಧನುಷ್ ರೆಡ್ಡಿ(31) ಮೃತ ವ್ಯಕ್ತಿ. ಇವರು ಕಳೆದ ಬುಧವಾರ ಪ್ರವಾಹದಲ್ಲಿ ಸಿಲುಕಿದ್ದ ಮಹಿಳೆಯ ನರಳಾಟವನ್ನು ಕೇಳಿ ರಕ್ಷಿಸಲು ಮುಂದಾದ ಗಿದ್ದರು. ಅದರೆ ಇದೇ ವೇಳೆ ಪ್ರವಾಹದ ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ಬೃಹತ್ ಗಾತ್ರದ ಪೈಪ್ ಲೈನಲ್ಲಿ ಕೊಚ್ಚಿ ಹೋದ ಧನುಷ್ ರೆಡ್ಡಿ ಮೃತ ದೇಹ ಒಂದು ದಿನದ ನಂತರ ಅಂದರೆ ಗುರುವಾರ ಪತ್ತೆಯಾಗಿದೆ.
ಕಳೆದ 7-8 ವರ್ಷಗಳಿಂದ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಧನುಷ್ ರೆಡ್ಡಿ ಅಮೇರಿಕಾದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಬೆಂಗಳೂರಿನ ಮಹಾರಾಣಿ ವಿಜ್ಞಾನ ಕಾಲೇಜಿನ ನಿವೃತ್ತ ಉಪನ್ಯಾಸಕಿ ವಿಜಯಲಕ್ಷ್ಮೀ ಹಾಗೂ ರಕ್ಷಣಾ ಇಲಾಖೆಯಲ್ಲಿ ಆಡಿಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ನಾಗರಾಜ್‍ರವರ ಪುತ್ರರಾಗಿದ್ದಾರೆ. ಇನ್ನೂ ಧನುಷ್ ರೆಡ್ಡಿಯವರ ತಂಗಿ ಸಹ ಕಳೆದ 3-4 ತಿಂಗಳ ಹಿಂದೆಯಷ್ಟೇ ಅಮೇರಿಕಾದಲ್ಲಿ ಕೆಲಸ ಮಾಡಲು ತೆರಳಿದ್ದಾರೆ. ಅಮೇರಿಕಾದ ಸುದ್ದಿ ಸಂಸ್ಥೆಯೊಂದು ಈ ಸುದ್ದಿಯನ್ನು ಪ್ರಕಟ ಮಾಡಿದ್ದು, ಅಮೇರಿಕಾದಲ್ಲಿ ಭಾರೀ ಮಳೆ ಪ್ರವಾಹಕ್ಕೆ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಸದ್ಯ ಮೃತ ಧನುಷ್ ರೆಡ್ಡಿ ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟಿದೆ. ಮೃತದೇಹವನ್ನು ಭಾರತಕ್ಕೆ ತರಲು ಪ್ರಯತ್ನಗಳನ್ನು ನಡೆಸಲಾಗುತ್ತಿದ್ದು ಸರ್ಕಾರ ಸಹಾಯಹಸ್ತ ಚಾಚಬೇಕಾಗಿ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.