ನವದೆಹಲಿ: ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಖ್ಯಾತ ಹಿರಿಯ ಪತ್ರಕರ್ತ ಚಂದನ್ ಮಿತ್ರಾ ಅವರು ಗುರುವಾರ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಈ ಕುರಿತಂತೆ ಚಂದನ್ ಮಿತ್ರಾ ಅವರ ಪುತ್ರ ಕುಶನ್ ಮಿತ್ರಾ ಅವರು ಮಾಹಿತಿ ನೀಡಿದ್ದು, ಟ್ವೀಟ್ ಮಾಡಿ ತಮ್ಮ ನೋವು ಹಂಚಿಕೊಂಡಿದ್ದಾರೆ.
ಚಂದನ್ ಮಿತ್ರಾ ದೆಹಲಿಯ ದಿ ಪಯೋನಿಯರ್ ಪತ್ರಿಕೆಯ ಸಂಪಾದಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಅಲ್ಲದೆ ಅವರು ಎರಡು ಬಾರಿ ರಾಜ್ಯಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು – ಮೊದಲಿಗೆ 2003 ರಿಂದ 2009 ರವರೆಗೆ ನಾಮನಿರ್ದೇಶಿತ ಸಂಸದರಾಗಿ ಮತ್ತು 2010 ರಿಂದ 2016 ರವರೆಗೆ ಮಧ್ಯಪ್ರದೇಶದಿಂದ ಭಾರತೀಯ ಜನತಾ ಪಕ್ಷದ ಸಂಸದರಾಗಿ ಆಯ್ಕೆಯಾಗಿದ್ದರು. 2018 ರಲ್ಲಿ ಮಿತ್ರಾ ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್ ಸೇರಿದ್ದರು.
ಪ್ರಧಾನಿ ಮೋದಿ ಕಂಬನಿ
ಇನ್ನು ಇಂದು ನಿಧನರಾದ ಹಿರಿಯ ಪತ್ರಕರ್ತ ಚಂದನ್ ಮಿತ್ರಾ ಅವರ ಸಾವಿಗೆ ಪ್ರಧಾನಿ ಮೋದಿ ಕಂಬನಿ ಮಿಡಿದಿದ್ದು, ‘ಚಂದನ್ ಮಿತ್ರ ಅವರು ತಮ್ಮ ಬುದ್ಧಿಶಕ್ತಿ ಮತ್ತು ಒಳನೋಟಗಳಿಂದ ನೆನಪಿನಲ್ಲಿ ಉಳಿಯುತ್ತಾರೆ. ಅವರು ಮಾಧ್ಯಮ ಹಾಗೂ ರಾಜಕೀಯ ಜಗತ್ತಿನಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಅವರ ನಿಧನದಿಂದ ನೋವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪ ಸೂಚಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.