Ad Widget .

ದ.ಕ ದಲ್ಲಿ ವೀಕೆಂಡ್ ಕರ್ಪ್ಯೂ ಇನ್ಮುಂದೆ ಹೀಗಿರಲಿದೆ.| ಹೊಸ ಮಾರ್ಗಸೂಚಿ ಪ್ರಕಟಿಸಿದ ಡಿಸಿ ಡಾ| ರಾಜೇಂದ್ರ ಕೆ.ವಿ

Ad Widget . Ad Widget .

ಮಂಗಳೂರು: ರಾಜ್ಯ ಸರ್ಕಾರದ ಆದೇಶ ಹಾಗೂ ಜಿಲ್ಲೆಯ ವಿದ್ಯಮಾನಗಳನ್ನು ಗಮನಿಸಿ, ಕೋವಿಡ್-19 ಪ್ರಸರಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಕೆಲವು ನಿರ್ಬಂಧಗಳನ್ನು ಜಾರಿ ಮಾಡಿದ್ದಾರೆ.

Ad Widget . Ad Widget .

ಮುಂದಿನ ಆದೇಶದವರೆಗೆ ಜಿಲ್ಲೆಯಾದ್ಯಂತ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿ ಇರುತ್ತದೆ. ವಾರಾಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿ ಇರಲಿದೆ.

ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ, ಚಾಲ್ತಿಯಲ್ಲಿರುವ ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಿ ಪರೀಕ್ಷೆಗಳಿಗೆ ಹಾಜರಾಗಲು ಅನುಮತಿ ನೀಡಲಾಗಿದೆ. ಪರೀಕ್ಷಾ ಪ್ರವೇಶ ಪತ್ರವನ್ನು ಅಧಿಕೃತವಾಗಿ ವಿದ್ಯಾರ್ಥಿಗಳ ಪ್ರಯಾಣದ ಪಾಸ್ ಎಂದು ಪರಿಗಣಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳು ಮತ್ತು ಅವರ ಪರಿಚಾರಕರು ಅಥವಾ ವ್ಯಕ್ತಿಗಳಿಗೆ ಸಂಚರಿಸಲು ಅನುಮತಿ ಇದೆ. ಅಗತ್ಯವಿರುವಂತಹ ಎಲ್ಲ ಕೈಗಾರಿಕೆಗಳು ಅಥವಾ ಕಂಪನಿಗಳಿಗೆ ರಾತ್ರಿ ವೇಳೆ ಕಾರ್ಯನಿರ್ವಹಿಸಲು ಅನುಮತಿ ಇದ್ದು, ಅಂತಹ ಸಂಸ್ಥೆಗಳ ನೌಕರರು, ಸಂಸ್ಥೆಗಳ ಅಧಿಕೃತ ಗುರುತಿನ ಚೀಟಿ ತೋರಿಸಿ ಪ್ರಯಾಣಿಸಬಹುದು.

ಬಸ್‌, ರೈಲು ಮತ್ತು ವಿಮಾನ ಪ್ರಯಾಣಕ್ಕೆ ಅನುಮತಿಸಲಾಗಿದೆ. ವಿಮಾನ, ಬಸ್ ಹಾಗೂ ರೈಲ್ವೆ ನಿಲ್ದಾಣಗಳಿಗೆ ಹೋಗಿ ಬರಲು ಸಾರ್ವಜನಿಕ ಸಾರಿಗೆ ವಾಹನ, ಖಾಸಗಿ ವಾಹನ ಮತ್ತು ಟ್ಯಾಕ್ಸಿಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಅಧಿಕೃತ ಪ್ರಯಾಣದ ದಾಖಲೆ ಅಥವಾ ಟಿಕೆಟ್‌ ತೋರಿಸಬೇಕು.

ರಾತ್ರಿ ಕರ್ಫ್ಯೂ: ಸಾರ್ವಜನಿಕರ ಓಡಾಟವನ್ನು ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5ಗಂಟೆಯವರೆಗೆ ಅತ್ಯವಶ್ಯಕ ಹಾಗೂ ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಔಷಧ ಮಳಿಗೆ, ವೈದ್ಯಕೀಯ, ತುರ್ತು ಮತ್ತು ಅತ್ಯವಶ್ಯಕ ಸೇವೆಗಳು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ, ಉಳಿದಂತೆ ಇತರೆ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.

ಖಾಲಿ ವಾಹನಗಳು ಸೇರಿದಂತೆ, ಟ್ರಕ್‌ಗಳು, ಸರಕು ಸಾಗಣೆ ವಾಹನಗಳ ಮೂಲಕ ಎಲ್ಲ ಬಗೆಯ ಸರಕುಗಳನ್ನು ಸಾಗಿಸುವುದಕ್ಕೆ ನಿರ್ಬಂಧವಿಲ್ಲ. ಇ-ವಾಣಿಜ್ಯ ಕಂಪನಿಗಳಿಂದ ಸರಕುಗಳ ಹೋಂ ಡೆಲಿವರಿಗೆ ಅನುಮತಿ ನೀಡಲಾಗಿದೆ.

ವಾರಾಂತ್ಯದ ಕರ್ಫ್ಯೂ: ಅತ್ಯವಶ್ಯಕ ಮತ್ತು ತುರ್ತು ಕಾರ್ಯ ಚಟುವಟಿಕೆಗಳನ್ನು ಹೊರತುಪಡಿಸಿ, ಶುಕ್ರವಾರ ಸಂಜೆ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಜನರ ಓಡಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಕೋವಿಡ್-19 ನಿಯಂತ್ರಣ ಮತ್ತು ನಿರ್ವಹಣಾ ಕಾರ್ಯಗಳನ್ನು ನಿರ್ವಹಿಸುವ ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲ ಕಚೇರಿಗಳ ಅಧಿಕಾರಿ, ಸಿಬ್ಬಂದಿಗೆ ಓಡಾಟಕ್ಕೆ ಅವಕಾಶ ನೀಡಲಾಗಿದೆ. ತುರ್ತು ಸೇವೆಗಳನ್ನು ನಿರ್ವಹಿಸುವ ಮತ್ತು ನಿರಂತರ ಕಾರ್ಯಾಚರಣೆ ಅಗತ್ಯವಿರುವ ಎಲ್ಲ ಕೈಗಾರಿಕೆಗಳು, ಕಂಪನಿಗಳು ಮತ್ತು ಸಂಸ್ಥೆಗಳಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.

ವಾರಾಂತ್ಯ ಕರ್ಫ್ಯೂ ಅವಧಿಯಲ್ಲಿ ನಂದಿನಿ ಹಾಲು ಮಾರಾಟ ಮಳಿಗೆಗಳಿಗೆ ಮಾತ್ರ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾರಾಟ ಮಾಡಲು ಅನುಮತಿ ನೀಡಲಾಗಿದೆ, ವಿವಾಹ ಅಥವಾ ಕೌಟುಂಬಿಕ ಕಾರ್ಯಗಳನ್ನು ಗರಿಷ್ಠ 50 ಜನರ ಮಿತಿಗೆ ಒಳಪಟ್ಟು, ಸ್ಥಳೀಯ ಆಡಳಿತಗಳಿಂದ ಪೂರ್ವಾನುಮತಿಯೊಂದಿಗೆ ಆಯೋಜಿಸಲು ಅನುಮತಿ ನೀಡಲಾಗಿದೆ.

7 ದಿನಗಳ ಕ್ವಾರಂಟೈನ್‌ ಕಡ್ಡಾಯ
ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ವಿದ್ಯಾಭ್ಯಾಸಕ್ಕಾಗಿ ಬರುವ ಎಲ್ಲ ವಿದ್ಯಾರ್ಥಿಗಳು 72 ಗಂಟೆಗಳ ಒಳಗಿನ ಆರ್‌ಟಿಪಿಸಿಆರ್‌ ನೆಗೆಟಿವ್ ವರದಿ ತರುವುದು ಕಡ್ಡಾಯ. ಜಿಲ್ಲೆಗೆ ಬರುವ ಇಂತಹ ವಿದ್ಯಾರ್ಥಿಗಳನ್ನು 7 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಪಡಿಸಿ, 7 ದಿನಗಳ ನಂತರ ಕಡ್ಡಾಯವಾಗಿ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಮಾರ್ಗಸೂಚಿಯು ಕೇರಳದಿಂದ ಉದ್ಯೋಗಕ್ಕಾಗಿ ಜಿಲ್ಲೆಗೆ ಬರುವ ಅಥವಾ ಭೇಟಿ ಕಾರಣಕ್ಕಾಗಿ ಬರುವ ಪ್ರತಿಯೊಬ್ಬರಿಗೆ ಅನ್ವಯವಾಗಲಿದೆ, ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶ ಸಂದರ್ಭದಲ್ಲಿ ಕಡ್ಡಾಯವಾಗಿ ಆರ್‌ಟಿಪಿಸಿಆರ್‌ ವರದಿಯನ್ನು ಹಾಜರುಪಡಿಸಬೇಕು. ನೆಗೆಟಿವ್ ವರದಿಯನ್ನು ಹೊಂದಿರುವುದನ್ನು ಅಧಿಕಾರಿಗಳು ಖಾತರಿಪಡಿಸಿಕೊಳ್ಳಬೇಕು ಎಂದು ಹೇಳಲಾಗಿದೆ.

ವಾರಾಂತ್ಯದಲ್ಲಿ ದಿನಸಿ, ತರಕಾರಿಗೆ ಅವಕಾಶ
ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸಿಕೊಂಡು ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಾರ್ಯನಿರ್ವಹಿಸಲು ಈ ಕೆಳಕಂಡ ಚಟುವಟಿಕೆಗಳಿಗೆ ಅನುಮತಿಸಿದೆ.

ಆಹಾರ, ದಿನಸಿ, ಹಣ್ಣುಗಳು ಮತ್ತು ತರಕಾರಿಗಳು, ಮಾಂಸ ಮತ್ತು ಮೀನು ಮತ್ತು ಪ್ರಾಣಿಗಳ ಮೇವನ್ನು ಮಾರಾಟ ಮಾಡುವ ಅಂಗಡಿಗಳು, ಬೀದಿ ಬದಿ ವ್ಯಾಪಾರಸ್ಥರು, ನ್ಯಾಯಬೆಲೆ ಅಂಗಡಿಗಳು, ಸ್ವತಂತ್ರ ಮದ್ಯದಂಗಡಿಗಳು ಮತ್ತು ಮಳಿಗೆಗಳು ಪಾರ್ಸೆಲ್ ಕೊಂಡು ಹೋಗಲು ಮಾತ್ರವೇ ಅವಕಾಶ ನೀಡಲಾಗಿದೆ.

ಜನರ ಓಡಾಟ ಕಡಿಮೆ ಮಾಡಲು ಎಲ್ಲ ಸಾಮಗ್ರಿಗಳನ್ನು ಹೋಂ ಡೆಲಿವೆರಿ ಮಾಡಲು ಪ್ರೋತ್ಸಾಹಿಸಬೇಕು. ರೆಸ್ಟೊರೆಂಟ್‌ ಮತ್ತು ಹೋಟೆಲ್‌ಗಳಲ್ಲಿ ಆಹಾರವನ್ನು ಮನೆಗೆ ತೆಗೆದುಕೊಂಡು ಹೋಗಲು ಮತ್ತು ಹೋಂ ಡೆಲಿವರಿ ನೀಡಲು ಮಾತ್ರ ಅನುಮತಿ ನೀಡಲಾಗಿದೆ.

  • ಗಡಿ ಭಾಗದ ಮದ್ಯದಂಗಡಿಗಳು ಇನ್ನೂ ಒಂದು ವಾರ ಬಂದ್
  • ಜಿಲ್ಲೆಯ ಇತರೆಡೆ ಮದ್ಯದಂಗಡಿಗಳಿಗೆ ರಾತ್ರಿ 9 ರವರೆಗೆ ಅವಕಾಶ

Leave a Comment

Your email address will not be published. Required fields are marked *