ಕಾಬೂಲ್, ಸೆ.1: ಭಾರತದಲ್ಲಿ ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿರುವ 25ಕ್ಕೂ ಹೆಚ್ಚು ಮಂದಿ ಉಗ್ರರು ಅಪ್ಘಾನಿಸ್ತಾನದಲ್ಲಿ ಸಕ್ರಿಯರಾಗಿದ್ದಾರೆ ಎಂಬ ಮಾಹಿತಿಯನ್ನು ಗುಪ್ತಚರ ಮೂಲಗಳು ತಿಳಿಸಿವೆ. ಇತ್ತೀಚೆಗೆ ಕಾಬೂಲನ್ನು ತಾಲಿಬಾನಿಗಳು ವಶಕ್ಕೆ ಪಡೆಯುತ್ತಿದ್ದಂತೆ, ಅಲ್ಲಿನ ಜೈಲಿನಲ್ಲಿದ್ದ ಸಾವಿರಾರು ಕೈದಿಗಳನ್ನು ಹೊರಕ್ಕೆ ಬಿಡಲಾಗಿತ್ತು. ಅದರಲ್ಲಿ ಹಲವು ಭಾರತ ಮೂಲದವರೂ ಇದ್ದರು ಎನ್ನಲಾಗಿದ್ದು, ಇದೀಗ ಅಫ್ಘಾನಿಸ್ತಾನದ ನಂಗರ್ಹರ್ ಪ್ರಾಂತ್ಯದಲ್ಲಿ ಬೀಡುಬಿಟ್ಟಿದ್ದಾರೆ ಎನ್ನಲಾಗುತ್ತಿದೆ.
25 ಮಂದಿಯ ಪೈಕಿ ಹೆಚ್ಚಿನವರು ಭಾರತದ ಕೇರಳದವರು ಎನ್ನುವ ಮಾಹಿತಿಯನ್ನು ಗುಪ್ತಚರ ಪಡೆಗಳು ಹೇಳುತ್ತಿವೆ. ಕಳೆದ ವಾರ ಕಾಬೂಲ್ ಏರ್ಪೋರ್ಟ್ ನಲ್ಲಿ ನಡೆದಿದ್ದ ಆತ್ಮಹತ್ಯಾ ದಾಳಿಯನ್ನು ಐಸಿಸ್ ಪಡೆಗಳು ನಡೆಸಿದ್ದವು. ಅದರಲ್ಲಿ ಭಾರತ ಮೂಲದವರೂ ಭಾಗಿಯಾಗಿರುವ ಸಾಧ್ಯತೆ ಇದೆ ಎನ್ನುವ ಬಗ್ಗೆ ಗುಪ್ತಚರ ಏಜನ್ಸಿ ಮಾಹಿತಿ ಕಲೆಹಾಕಿದೆ. ಭಾರತೀಯ ಮೂಲದ ಐಸಿಸಿ ಉಗ್ರರು ನಂಗರ್ಹರ್ ಪ್ರಾಂತ್ಯದಲ್ಲಿ ಇದ್ದಾರೆ ಎನ್ನಲಾಗುತ್ತಿದೆ.
ನಂಗರ್ಹರ್ ಪ್ರಾಂತ್ಯ ಸದ್ಯಕ್ಕೆ ಐಸಿಸ್ ಟಾಪ್ ಲೀಡರ್ ಆಗಿರುವ ಅಮಿನ್ ಅಲ್ ಹಕ್ ಎಂಬಾತನ ಊರು. ಹಿಂದೆ ಒಸಾಮಾ ಬಿನ್ ಲಾಡೆನ್ ಇದ್ದಾಗ ಆತನ ಸೆಕ್ಯುರಿಟಿ ಚೀಫ್ ಆಗಿದ್ದ ಅಮಿನ್ ಅಲ್ ಹಕ್, ಸದ್ಯಕ್ಕೆ ಪವರ್ ಫುಲ್ ನಾಯಕರಲ್ಲಿ ಒಬ್ಬನಾಗಿದ್ದಾನೆ. ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಅಫ್ಘಾನಿಸ್ತಾನ ವ್ಯಾಪ್ತಿಯ ನಂಗರ್ಹರ್ ಪ್ರದೇಶದಲ್ಲಿ ಐಸಿಸ್ ಉಗ್ರರ ಪ್ರಾಬಲ್ಯವಿದೆ. ಈ ಪೈಕಿ ಭಾರತದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ಅಜೀಜ್ ಅಹಂಗರ್ ಕೂಡ ಕಾಬೂಲ್ ಜೈಲಿನಿಂದ ಬಿಡುಗಡೆಯಾಗಿದ್ದು, ಇದೇ ಪ್ರಾಂತ್ಯದಲ್ಲಿದ್ದಾನೆ ಎನ್ನಲಾಗುತ್ತಿದೆ. ಐಸಿಸ್ ಖೊರಸಾನ್ ಪಡೆಗೆ ಯುವಕರನ್ನು ಸೇರ್ಪಡೆ ಮಾಡುತ್ತಿದ್ದವರ ಪೈಕಿ ಅಜೀಜ್ ಅಹಂಗರ್ ಕೂಡ ಪ್ರಮುಖವಾಗಿದ್ದ.
ಇದಲ್ಲದೆ, ಈ 25 ಮಂದಿ ಉಗ್ರರ ಪೈಕಿ ಕೇರಳದ ಕಾಸರಗೋಡು ಮೂಲದ ಅಬು ಖಾಲಿದ್ ಅಲ್ ಹಿಂದಿ ಅಲಿಯಾಸ್ ಮೊಹಮ್ಮದ್ ಸಾಜಿದ್ ಕುತಿರುಮ್ಮೋಲ್ ಕೂಡ ಒಬ್ಬನಾಗಿದ್ದಾನೆ. 2016ರಲ್ಲಿ ಕಾಸರಗೋಡು ಜಿಲ್ಲೆಯ ಪಡನ್ನ ಪಂಚಾಯತ್ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ 21 ಮಂದಿಯಲ್ಲಿ ಅಬು ಖಾಲಿದ್ ಕೂಡ ಒಬ್ಬ. ಎನ್ಐಎ ತನಿಖೆಯ ಸಂದರ್ಭದಲ್ಲಿ ಪಡನ್ನ ಪ್ರದೇಶದಲ್ಲಿ ಅಬು ಖಾಲಿದ್ ಒಂದು ಅಂಗಡಿ ನಡೆಸುತ್ತಿದ್ದ ಅನ್ನುವುದನ್ನು ಪತ್ತೆ ಮಾಡಲಾಗಿತ್ತು. ಆನಂತರ ದಿಢೀರ್ ಆಗಿ ನಾಪತ್ತೆಯಾಗಿದ್ದ ಅಬು ಖಾಲಿದ್, ಸಿರಿಯಾ ಮೂಲದ ಐಸಿಸ್ ಸಂಘಟನೆ ಸೇರ್ಪಡೆಯಾಗಿದ್ದ ಎನ್ನುವುದನ್ನು ಎನ್ಐಎ ಅಧಿಕಾರಿಗಳು ಪತ್ತೆ ಮಾಡಿದ್ದರು. ಆನಂತರ ಇಂಟರ್ ಪೋಲ್ ನಲ್ಲಿ ಅಬು ಖಾಲಿದ್ ಬಗ್ಗೆ ರೆಡ್ ಕಾರ್ನರ್ ನೋಟೀಸ್ ಮಾಡಿದ್ದರು. ಅಬು ಖಾಲಿದ್, ಕಳೆದ ವರ್ಷ ಕಾಬೂಲಿನಲ್ಲಿ ನಡೆದಿದ್ದ ಸಿಖ್ ಗುರುದ್ವಾರಕ್ಕೆ ದಾಳಿ ನಡೆಸಿದ್ದ ಪ್ರಕರಣದಲ್ಲಿಯೂ ಭಾಗಿಯಾಗಿದ್ದ.
ಭಾರತೀಯ ಮೂಲದ ಐಸಿಸ್ ಉಗ್ರರು ಈಗ ಜೈಲಿನಿಂದ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಮತ್ತೆ ಭಾರತದ ತಮ್ಮ ಮೂಲಗಳ ಜೊತೆ ಸಂಪರ್ಕ ಸಾಧಿಸುವ ಸಾಧ್ಯತೆಯಿದೆ. ಅಲ್ಲದೆ, ತಮ್ಮ ಸ್ಲೀಪರ್ ಸೆಲ್ ಗಳನ್ನು ಮತ್ತೆ ಸಕ್ರಿಯವಾಗಿಸಲು ಮತ್ತು ವಿಧ್ವಂಸಕ ಕೃತ್ಯಕ್ಕೆ ಸಂಚು ಹೂಡಲು ತಯಾರಿ ನಡೆಸಬಹುದು ಲೆಕ್ಕಾಚಾರದ ನೆಲೆಯಲ್ಲಿ ಗುಪ್ತಚರ ಏಜನ್ಸಿಗಳು ಭಾರತದಲ್ಲಿ ಅಲರ್ಟ್ ಮಾಡಿವೆ.