ಮಂಗಳೂರು: ಮಳೆಗಾಲದಲ್ಲಿ ಹುಲುಸಾಗಿ ಬೆಳೆದ ಹುಲ್ಲನ್ನು ತಿನ್ನುತ್ತಾ, ದಷ್ಟಪುಷ್ಟವಾಗಿ ಬೆಳೆದ ಬಿಡಾಡಿ ಕೋಣವದು. ಕೋಣದ ಯಜಮಾನ ಕೋಣವನ್ನು ಹಟ್ಟಿಗೆ ಸೇರಿಸದೇ ಬಿಟ್ಟು ಬಿಟ್ಟಿದ್ದ. ಕೋಣ ಊರಿನಲ್ಲೇ ಹುಲ್ಲಿದ್ದ ಜಾಗದಲ್ಲಿ ಮೇದು ಅಲ್ಲೇ ಮಲಗಿ ದಿನ ಕಳೆಯುತಿತ್ತು.
ಆಹಾರ ಅರಸುತ್ತಾ, ಹುಲ್ಲು ಜಾಸ್ತಿ ಬೆಳೆದ ತೋಟಕ್ಕೆ ಕೋಣ ನುಗ್ಗಿದ್ದೇ ತಪ್ಪಾಗಿತ್ತು. ತೋಟದ ಮಾಲೀಕನ ಕೆಂಗಣ್ಣಿಗೆ ಕೋಣ ಅನಾಯಾಸವಾಗಿ ಬಿದ್ದಿತ್ತು. ಕೋಣವನ್ನು ತೋಟದಿಂದ ಓಡಿಸಲು ನಾನಾ ಪ್ರಯತ್ನ ಪಟ್ಟರೂ ಕೋಣ ಮಾತ್ರ ಜಪ್ಪಯ್ಯ ಅಂದ್ರೂ ತೋಟ ಬಿಡಲಿಲ್ಲ.
ಅಂತಿಮವಾಗಿ ಮಾಲೀಕ ತೋಟವನ್ನು ಹಾಳು ಮಾಡಿದ ಕೋಣವನ್ನು ಸಾಯಿಸಬೇಕು ಅಂತಾ ಯೋಚನೆ ಮಾಡಿದ. ತೋಟದ ಮಾಲೀಕ ಕೋಣದ ಹತ್ಯೆಗೆ ಸುಪಾರಿ ಕೊಟ್ಟುಬಿಟ್ಟ. ಸುಪಾರಿ ಪಡೆದು ಹತ್ಯೆ ಮಾಡಿದವರು ಈಗ ಜೈಲು ಸೇರಿದ್ದಾರೆ.
ದ್ವೇಷ ಅತಿಯಾಗಿ ಶತ್ರುವಿನ ಕೊಲೆಗೆ ಸುಪಾರಿ ಕೊಟ್ಟ ರೀತಿ, ತೋಟದ ಮಾಲೀಕ ಕೋಣದ ಹತ್ಯೆಗೆ ಸುಪಾರಿ ಕೊಟ್ಟಿದ್ದಾನೆ. ಈ ಅಮಾನುಷ ಕೃತ್ಯದ ಸೂತ್ರಧಾರಿ ತೋಟದ ಮಾಲೀಕ ಮಂಗಳೂರು ತಾಲೂಕಿನ ಕೋಟೆಕಾರು ಗ್ರಾಮದ ಮಡ್ಯಾರ್ ನಿವಾಸಿ ಜಯರಾಮ ಶೆಟ್ಟಿ.
ತೋಟದ ಮಾಲೀಕ ಜಯರಾಮ ಶೆಟ್ಟಿಗೆ ಕೋಣ ತೋಟದ ಬಾಳೆಗಿಡ, ಅಡಿಕೆ ಮರದ ಬುಡವೆನ್ನೆಲ್ಲಾ ತುಳಿದು ಹಾಳು ಮಾಡಿರೋದು ಕೋಪ ನೆತ್ತಿಗೇರುವಂತೆ ಮಾಡಿದೆ. ಮೊದಲೇ ಬೀಡಾಡಿ ಕೋಣ ಆಗಿರೋದರಿಂದ ವಾರಸುದಾರರಿಲ್ಲದ ಕೋಣವನ್ನು ತೋಟದಿಂದ ಹಗಲು ಹೊತ್ತು ಓಡಿಸಿದರೆ ರಾತ್ರಿ ಮತ್ತೆ ತೋಟಕ್ಕೆ ಮೇಯಲು ಬರುತ್ತಿತ್ತು. ಇದೇ ರೀತಿ ಹಲವು ಬಾರಿ ಆದಾಗ ಜಯರಾಮ ಶೆಟ್ಟಿ, ಅಕ್ರಮ ಕಸಾಯಿಖಾನೆ ನಡೆಸುತ್ತಿರುವವರಿಗೆ ಸುಪಾರಿ ಕೊಟ್ಟಿದ್ದಾನೆ.
ಕೋಣವನ್ನು ಯಾರಿಗೂ ಗೊತ್ತಾಗದ ಹಾಗೇ ತೋಟದಲ್ಲೇ ಸಾಯಿಸಿ, ಮಾಂಸ ಮಾಡಿಕೊಂಡು ಹೋಗುವಂತೆ ಆಫರ್ ಕೂಡಾ ಕೊಟ್ಟಿದ್ದಾನೆ. ದಷ್ಟಪುಷ್ಟವಾಗಿ ಬೆಳೆದ ಕೋಣವನ್ನು ಇಬ್ಬರು ನಾಲ್ವರಿಂದ ಹಿಡಿಯಲು ಅಸಾಧ್ಯವಾದ ಕಾರಣ 6 ಮಂದಿ ಕಸಾಯಿಗಳ ತಂಡ ಜಯರಾಮ ಶೆಟ್ಟಿಯ ತೋಟಕ್ಕೆ ಲಗ್ಗೆ ಇಟ್ಟಿದೆ. ಸ್ಥಳೀಯರೇ ಆದ ಉಮ್ಮರ್, ಉಮ್ಮರ್ ಫಾರೂಕ್, ಮಹಮ್ಮದ್ ಸುಹೈಲ್, ಮಹಮ್ಮದ್ ಕಲಂದರ್, ಸಿನಾನ್ ಮತ್ತು ಇಲ್ಯಾಸ್ ತಂಡ ಜಯರಾಮ ಶೆಟ್ಟಿ ತೋಟದಲ್ಲಿ ಕೋಣಕ್ಕಾಗಿ ಹೊಂಚು ಹಾಕಿ ಕುಳಿತಿತ್ತು.
ಯಥಾಪ್ರಕಾರ ತೋಟಕ್ಕೆ ನುಗ್ಗಿದ ಕೋಣವನ್ನು ಹಗ್ಗದ ಸಹಾಯದಿಂದ ಹಿಡಿಯಲು ಆರು ಮಂದಿಯೂ ಪ್ರಯತ್ನ ಪಟ್ಟಿದ್ದಾರೆ..ಆದರೆ ಅದು ಸಫಲವಾಗದೇ ಇದ್ದಾಗ ಅರೋಪಿಗಳು ಕೋಣವನ್ನು ಗುಂಡು ಹೊಡೆದು ಸಾಯಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ಇದಕ್ಕಾಗಿ ಮಡಿಕೇರಿಯಿಂದ ತಂದ ಪರವಾನಿಗೆ ಇಲ್ಲದ ನಾಡಕೋವಿಯನ್ನು ಬಳಸಿ ಕೋಣಕ್ಕೆ ಎರಡು ಸುತ್ತು ಗುಂಡು ಹೊಡೆದಿದ್ದಾರೆ. ಅಲ್ಲಿಯವರಗೆ ಜಗ್ಗದ ಕೋಣ, ಗುಂಡು ದೇಹದ ಒಳಗೆ ಹೊಕ್ಕುತ್ತಿದ್ದಂತೆಯೇ, ಶಕ್ತಿ ಮೀರಿ ಅರಚಾಡಿದೆ. ಕೋಣವನ್ನು ಹಿಡಿದ ಆರೋಪಿಗಳು ಅಮಾನುಷವಾಗಿ ಕಟ್ಟಿ ಹಾಕಿ ಕುತ್ತಿಗೆಯನ್ನು ಚಾಕುವಿನಿಂದ ಇರಿದಿದ್ದಾರೆ. ಕೋಣದ ಭೀಕರ ಅರಚಾಟ ಕೇಳಿದ ಸ್ಥಳೀಯ ನಿವಾಸಿಗಳು ಜಯರಾಮ ಶೆಟ್ಟಿಯ ತೋಟದ ಬಳಿ ಬಂದಾಗ ಮಾತ್ರ ಕೋಣ ರಕ್ತದ ಮಡುವಿನಲ್ಲಿ ನರಳಿ ನರಳಿ ಸಾವನ್ನಪ್ಪಿದೆ.
ತೋಟದ ಮಾಲೀಕ ಜಯರಾಮ ಶೆಟ್ಟಿಯನ್ನು ಉಳ್ಳಾಲ ಪೊಲೀಸರು ಸ್ಥಳದಲ್ಲೇ ವಶಕ್ಕೆ ಪಡೆದು ಕೊಂಡರೇ, ಉಳಿದ ಆರೋಪಿಗಳನ್ನು ರಾತ್ರೋ ರಾತ್ರಿ ಕಾರ್ಯಾಚರಣೆ ಮಾಡಿ ಹೆಡೆಮುರಿ ಕಟ್ಟಿದ್ದಾರೆ. ಆರೋಪಿಗಳಿಂದ ಪಿಕ್ ಅಪ್ ವಾಹನ, ನಾಡಕೋವಿ, ಮಚ್ಚು, ಹಗ್ಗ ಇತ್ಯಾದಿ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ದೇವರು ಕೊಟ್ಟ ಬದುಕನ್ನು ಪಾಪಿ ಮನುಷ್ಯ ಮಾತ್ರ ಭೀಕರವಾಗಿ ಸಾಯಿಸಿಬಿಟ್ಟಿದ್ದಾನೆ. ಮನುಷ್ಯತ್ವ ಮರೆತ ಮಾನವ, ಜಗತ್ತಿನ ಕ್ರೂರ ಪ್ರಾಣಿಗಳಲ್ಲೊಬ್ಬ ಅನ್ನೋದು ಮಾತ್ರ ಮತ್ತೆ ಮತ್ತೆ ಸಾಬೀತಾಗುತ್ತಿದೆ.