ಮಂಗಳೂರು: ಪೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ಕೋರ್ಟಿಗೆ ಹಾಜರುಪಡಿಸಿದ ವೇಳೆ ನಗರದ ನ್ಯಾಯಾಲಯ ಸಂಕೀರ್ಣದ ಆರನೇ ಮಹಡಿಯಿಂದ ಹೊರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ.
ತಲಪಾಡಿ ಕಿನ್ಯ ನಿವಾಸಿ ರವಿರಾಜ್ (32) ಕೋರ್ಟ್ ಮಹಡಿಯಿಂದ ಹಾರಿ ಸಾವು ಕಂಡವರು. ರವಿರಾಜ್ ಅವರನ್ನು ಸೋಮವಾರ ತೊಕ್ಕೊಟ್ಟಿನ ಸೆಬಾಸ್ಟಿಯನ್ ಕಾಲೇಜು ಬಳಿ ಅಪ್ರಾಪ್ತ ಹುಡುಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದರು.
ಆರೋಪಿಯನ್ನು ಇಂದು ಉಳ್ಳಾಲ ಪೊಲೀಸರು ಕೋರ್ಟಿಗೆ ಹಾಜರುಪಡಿಸಿದ್ದರು. ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೊರಗೆ ತಂದು ಕುಳಿತಿರುವಂತೆ ಪೊಲೀಸರು ಸೂಚಿಸಿದ್ದರು. ಆತನ ಪರವಾಗಿ ಹಾಜರಾಗಿದ್ದ ವಕೀಲರು ರವಿರಾಜ್ ಬಳಿ ಮಾತನಾಡಿದ್ದು ಅಲ್ಲಿಯೇ ಇದ್ದರು. ಆದರೆ, ಅದೇ ವೇಳೆಗೆ ಹಠಾತ್ತಾಗಿ ಆರೋಪಿ ರವಿರಾಜ್ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಆರನೇ ಮಹಡಿಯಿಂದ ಕೆಳಕ್ಕೆ ಹಾರಿದ್ದಾನೆ. ಕೋರ್ಟ್ ಒಳಗಡೆಯೇ ಲಿಫ್ಟ್ ಇರುವ ಜಾಗದಲ್ಲಿ ಮೇಲಿನಿಂದ ಕೆಳಕ್ಕೆ ಬಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು ಕಂಡಿದ್ದಾನೆ.
ಪ್ರಕರಣದಲ್ಲಿ ರವಿರಾಜ್, ತಾನೇನು ಹಾಗೆ ಮಾಡಿಲ್ಲ. ಪರಿಚಯದ ಹುಡುಗಿ ಎಂದು ಹತ್ತಿರ ಹೋಗಿದ್ದೆ ಎಂದು ವಕೀಲರಲ್ಲಿ ಹೇಳಿದ್ದರು. ಆದರೆ, ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ಸಾರ್ವಜನಿಕ ಪ್ರದೇಶದಲ್ಲಿ ಸೈಕಲಿನಲ್ಲಿ ಬಂದಿದ್ದ ಅನ್ಯಕೋಮಿನ ಹುಡುಗಿಯನ್ನು ಮುಟ್ಟಲು ಹೋಗಿದ್ದು ಸ್ಥಳೀಯರನ್ನು ಕೆರಳಿಸಿತ್ತು. ಸ್ಥಳೀಯರು ಸೇರಿ, ರವಿರಾಜ್ ಮೇಲೆ ಥಳಿಸಿ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿ ಪೊಲೀಸರ ಕೈಗೆ ಒಪ್ಪಿಸಿದ್ದರು. ಪೊಲೀಸರು ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಿಸಿದ್ದರು. ತಾನು ಮಾಡದ ತಪ್ಪಿಗೆ ಈ ರೀತಿ ಆಯ್ತಲ್ಲಾ ಎಂಬ ನೋವಿನಲ್ಲಿ ರವಿರಾಜ್ ಕೋರ್ಟ್ ಮಹಡಿಯಿಂದ ಹೊರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.