ಕಾಸರಗೋಡು: ಆನ್‍ಲೈನ್ ತರಗತಿಗೆ ವೇಳೆ ಮೊಬೈಲ್ ನೆಟ್‍ವರ್ಕ್ ಸಿಗದಿರುವ ಹಿನ್ನಲೆಯಲ್ಲಿ ಮರ ಹತ್ತಿದ ವಿದ್ಯಾರ್ಥಿ ಕೆಳಬಿದ್ದು ಗಂಭೀರ ಗಾಯಗೊಂಡ ಘಟನೆ ಕಣ್ಣೂರು ಕಣ್ಣವ ಬಳಿ ನಿನ್ನೆ ಸಂಜೆ ನಡೆದಿದೆ.
ಅನಂತು ಬಾಬು ಗಾಯಗೊಂಡ ವಿದ್ಯಾರ್ಥಿ. ಪ್ಲಸ್‍ವನ್ ಅಲೋಟ್ ಮೆಂಟ್ ವೀಕ್ಷಿಸಲು ಈತ ಮನೆ ಸಮೀಪದ ಮರ ಏರಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಮೊಬೈಲ್ ರೇಂಜ್ ಲಭಿಸದಿರುವುದರಿಂದ ಮರವೇರಿ ರೆಂಬೆಯಲ್ಲಿ ಕುಳಿತು ವೀಕ್ಷಿಸುತ್ತಿದ್ದಾಗ ಆಕಸ್ಮಿಕವಾಗಿ ಕೆಳಬಿದ್ದು ಈ ಘಟನೆ ನಡೆದಿದೆ. ಸದ್ಯ ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಬೆನ್ನು ಮೂಳೆಗೆ ಗಾಯವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಕಾಲನಿಯಲ್ಲಿ 72 ರಷ್ಟು ವಿದ್ಯಾರ್ಥಿಗಳಿದ್ದಾರೆ. ಇವರು ಆನ್ ಲೈನ್ ತರಗತಿಗೆ ರೇಂಜ್ ಹುಡುಕಿಕೊಂಡು ಗುಡ್ಡ ಬೆಟ್ಟ ಸುತ್ತಾಡಬೇಕು. ಇಲ್ಲದಿದ್ದಲ್ಲಿ ಮರವೇರಬೇಕಾದ ಅನಿವಾರ್ಯ ಸ್ಥಿತಿ ಉಂಟಾಗುತ್ತಿದ್ದು , ಮೊಬೈಲ್ ರೇಂಜ್ ಸಮಸ್ಯೆಯಿಂದ ವಿದ್ಯಾರ್ಥಿಗಳು ಸಮಸ್ಯೆಗೆ ಒಳಗಾಗುತ್ತಿದ್ದಾರೆ