ಬಂಟ್ವಾಳ: ಕಾರಿಂಜ ದೇವಸ್ಥಾನದ ಬಳಿ ಅನ್ಯಕೋಮಿನ ಯುವಕರೊಂದಿಗೆ ಪತ್ತೆಯಾದ ಹಿಂದೂ ಯುವತಿಯರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ದೇವಸ್ಥಾನಕ್ಕೆ ಪುವಾಸಕ್ಕೆಂದು ಬಂದ ತಮ್ಮನ್ನು ತಡೆದು ಹಿಂದೂ ಸಂಘಟನೆಯ ಕಾರ್ಯಕರ್ತರ ತಂಡದವರು ಗೂಂಡಾಗಿರಿ ನಡೆಸಿದ್ದಾರೆಂದು ಆರೋಪಿಸಿ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಸಂತ್ರಸ್ತ ವಿದ್ಯಾರ್ಥಿನಿಯೊಬ್ಬಳು ದೂರು ನೀಡಿದ್ದಾಳೆ.
ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುತ್ತಿರುವ ಮೂವರು ವಿದ್ಯಾರ್ಥಿನಿಯರು, ಮೂವರು ವಿದ್ಯಾರ್ಥಿಗಳು ಗುರುವಾರ ಸಂಜೆ ಕಾರಿಂಜ ದೇವಸ್ಥಾನಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ವಿದ್ಯಾರ್ಥಿಗಳು ದೇವಸ್ಥಾನದ ಪರಿಸದಲ್ಲಿ ಫೋಟೋ ತೆಗೆದು ಮನೆಗೆ ವಾಪಸ್ ತೆರಳುತ್ತಿದ್ದ ಸಂದರ್ಭದಲ್ಲಿ 5 ಮಂದಿ ಇದ್ದ ಸಂಘ ಪರಿವಾರದ ಕಾರ್ಯಕರ್ತರೆನ್ನಲಾದ ತಂಡವೊಂದು ಇವರನ್ನು ತಡೆದು ನಿಲ್ಲಿಸಿ ಪ್ರಶ್ನಿಸಿದೆ ಎನ್ನಲಾಗಿದೆ. ಹಿಂದೂ ಮತ್ತು ಮುಸ್ಲಿಮ್ ಧರ್ಮಕ್ಕೆ ಸೇರಿದ್ದ ವಿದ್ಯಾರ್ಥಿಗಳು ಇದ್ದಿದ್ದಕ್ಕೆ ಆಕ್ಷೇಪಿಸಿದ ತಂಡವು ಅವರನ್ನು ತರಾಟೆಗೈದಿದೆ ಎಂದು ದೂರಲಾಗಿದೆ.
ಸ್ಥಳಕ್ಕೆ ಬಂದ ಪುಂಜಾಲಕಟ್ಟೆ ಪೊಲೀಸರು ವಿದ್ಯಾರ್ಥಿಗಳನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದು, ನಮ್ಮನ್ನು ತಡೆದು ಪ್ರಶ್ನಿಸಿದ 5 ಮಂದಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.