ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಕೇಂದ್ರ ನಾಯಕರನ್ನು ಭೇಟಿಯಾಗಲು ದೆಹಲಿಗೆ ತೆರಳುತ್ತಿದ್ದಾರೆ. ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಲು ಕೇಂದ್ರ ನೀರಾವರಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಲಿದ್ದಾರೆ. ಹೀಗಾಗಿ ಇಂದು ಮಧ್ಯಾಹ್ನ 1.20ಕ್ಕೆ ನೀರಾವರಿ ಸಚಿವ ಗೋವಿಂದ ಕಾರಜೋಳ ಜೊತೆ ಸಿಎಂ ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ. ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ಕೂಡ ಸಿಎಂ ಜೊತೆ ಪ್ರಯಾಣ ಬೆಳೆಸಲಿದ್ದಾರೆ.
ದೆಹಲಿಯಲ್ಲಿ ಕೇಂದ್ರ ನೀರಾವರಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಚರ್ಚೆ ನಡೆಸಲಿದ್ದಾರೆ. ಮೇಕೆದಾಟು ಯೋಜನೆ ಕಾಮಗಾರಿಗೆ ಕೇಂದ್ರ ನೀರಾವರಿ ಸಚಿವರಿಂದ ಒಪ್ಪಿಗೆ ಪಡೆಯುವ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಕಳಸಾ ಬಂಡೂರಿ ಯೋಜನೆ ಕಾಮಗಾರಿಗಳ ಬಗ್ಗೆಯೂ ಸಿಎಂ ಬೊಮ್ಮಾಯಿ ಕೇಂದ್ರ ಸಚಿವ ಶೇಖಾವತ್ ಜೊತೆ ಚರ್ಚಿಸಲಿದ್ದಾರೆ.
ಇದಾದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿದ್ದಾರೆ. ರಾಜ್ಯ ಸರ್ಕಾರದ ಆಡಳಿತದ ಬಗ್ಗೆಯೂ ಸಿಎಂ ಹೈಕಮಾಂಡ್‍ಗೆ ಮಾಹಿತಿ ನೀಡಲಿದ್ದಾರೆ. ಮುಖ್ಯವಾಗಿ ಇನ್ನೂ ಖಾಲಿ ಉಳಿದಿರುವ ನಾಲ್ಕು ಸಚಿವ ಸ್ಥಾನ ಭರ್ತಿ ಸಂಬಂಧ ಸಿಎಂ ಹೈಕಮಾಂಡ್? ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಜೊತೆ ಸಿಎಂ ಬೊಮ್ಮಾಯಿ ಈ ಕುರಿತು ಚರ್ಚಿಸಲಿದ್ದಾರೆ.
ಇದರೊಂದಿಗೆ ಆನಂದ್ ಸಿಂಗ್ ಖಾತೆ ಬದಲಾವಣೆ ವಿಚಾರವನ್ನೂ ಸಹ ಬೊಮ್ಮಾಯಿ ಹೈಕಮಾಂಡ್ ಮುಂದೆ ಪ್ರಸ್ತಾಪಿಸಲಿದ್ದಾರೆ. ಸಿಂಗ್ ಖಾತೆಯನ್ನು ಅದಲು-ಬದಲು ಮಾಡುವ ಬಗ್ಗೆ ಸಿಎಂ ಚರ್ಚೆ ನಡೆಸಲಿದ್ದಾರೆ. ಹೀಗಾಗಿ ಸಚಿವ ಆನಂದ್ ಸಿಂಗ್ ಸಿಎಂ ದೆಹಲಿ ಪ್ರವಾಸದಿಂದ ತಮ್ಮ ಖಾತೆ ಬದಲಾವಣೆ ನಿರೀಕ್ಷೆಯಲ್ಲಿದ್ದಾರೆ.