ಹೈದರಾಬಾದ್: ವಿಶ್ವವಿದ್ಯಾಲಯದ ಅತಿಥಿಗೃಹಗಳನ್ನು ಸೆಮಿನಾರ್, ಉಪನ್ಯಾಸಗಳಿಗೆ ಬಳಕೆ ಮಾಡಲಾಗುತ್ತದೆ. ಆದರೆ ಆಂಧ್ರಪ್ರದೇಶದ ಕಾಕಿನಾಡ ಜವಾಹರಲಾಲ್ ನೆಹರು ಟೆಕ್ನಾಲಜಿಕಲ್ ಯೂನಿವರ್ಸಿಟಿ ಅತಿಥಿಗೃಹವನ್ನು ಹನಿಮೂನ್ ಗೆ ಬಳಕೆ ಮಾಡಿಕೊಂಡಿದ್ದು ಇದೀಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.
ವಿವಿಯ ಮಹಿಳಾ ಸಬಲೀಕರಣ ಕೋಶದ ನಿರ್ದೇಶಕಿ ಸ್ವರ್ಣಕುಮಾರಿ ಅವರು ವಿವಿಯ ಕ್ಯಾಂಪಸ್ ನಲ್ಲಿರುವ ಗೆಸ್ಟ್ ಹೌಸ್ ಪಡೆದುಕೊಂಡಿದ್ದರು. ಆದರೆ ಅವರು ಕಾಯ್ದಿರಿಸಿದ ಕೋಣೆಯನ್ನು ಎರಡು ದಿನ ಹನಿಮೂನ್ ಗೆ ಬಳಸಿಕೊಳ್ಳಲಾಗಿದೆ ಎಂಬುದು ಇದೀಗ ಹೊರಬಿದ್ದಿದೆ.
ಕೋಣೆಯನ್ನು ತೆರವು ಮಾಡಿದ ಬಳಿಕ ಪರಿಶೀಲನೆ ನಡೆಸಿದ ಸಿಬ್ಬಂದಿಗೆ ಬೆಡ್ ಮೇಲೆ ಹೂ ಹಾಕಿ ಹನಿಮೂನ್ ಗೆ ವ್ಯವಸ್ಥೆ ಮಾಡಿರುವುದು ಕಂಡುಬಂದಿದೆ. ವಿವಿಯ ರಿಜಿಸ್ಟಾರ್ ಶ್ರೀನಿವಾಸರಾವ್ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದು ತನಿಖೆಗಾಗಿ ಸಮಿತಿಯನ್ನು ಕೂಡ ರಚನೆ ಮಾಡಲಾಗಿದೆ.
ಅಧಿಕಾರಿಯ ಈ ಕಾರ್ಯಕ್ಕೆ ಇದೀಗ ವಿವಿಯಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.