ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು ತಾಲೂಕಿನ ವಿವಿಧ ಗ್ರಾಮಗಳ ಅಡಿಕೆ ತೋಟಗಳಿಗೆ ಬಾಧಿಸಿರುವ ಹಳದಿ ಎಲೆ ರೋಗ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕ್ರಮ ಗಗನಕುಸುಮವೇ ಆಗಿದೆ. ಆದರೆ ಇದೇ ಕೃಷಿ ಕ್ಷೇತ್ರದ ಶೋಭಾ ಕರಂದ್ಲಾಜೆ ಇದೀಗ ಕೇಂದ್ರ ಕೃಷಿ ಮಂತ್ರಿಯಾಗಿರುವುದರಿಂದ ಕಂಗೆಟ್ಟ ರೈತರಿಗೆ ಆಶಾವಾದದ ಸೆಲೆಯಾಗಿದ್ದಾರೆ.
ಸುಳ್ಯ ತಾಲೂಕಿನ ಸಂಪಾಜೆ ಪರಿಸರದಲ್ಲಿ 47 ವರ್ಷಗಳ ಹಿಂದೆ ಅಡಿಕೆ ಕೃಷಿಗೆ ಕಾಣಿಸಿಕೊಂಡ ಹಳದಿ ಎಲೆ ರೋಗ ಹಬ್ಬುತ್ತಿದ್ದು, ರೋಗ ನಿಯಂತ್ರಣಕ್ಕೆ ಪರಿಹಾರ ಸಿಗದ ಕಾರಣ ಕೃಷಿ ಕುಟುಂಬಗಳು ಅಕ್ಷರಶಃ ಕಂಗೆಟ್ಟು ಹೋಗಿವೆ. ಸಂಪಾಜೆ, ಚೆಂಬು, ಪೆರಾಜೆ ಮೊದಲಾದ ಗ್ರಾಮಗಳಲ್ಲಿ ಅಡಿಕೆ ಕೃಷಿ ಶೇ. 90ರಷ್ಟು ನಾಶವಾಗಿದ್ದು, ಪರ್ಯಾಯ ಬೆಳೆಯತ್ತ ಜನರು ಮುಖ ಮಾಡಿದ್ದಾರೆ. ಹಳದಿ ರೋಗದಿಂದಾಗಿ ಅಡಿಕೆಯನ್ನು ನಂಬಿರುವ ಕುಟುಂಬಗಳು ನೆಲೆ ಕಳೆದುಕೊಂಡು ಬೀದಿಗೆ ಬಂದಿವೆ.
ರೋಗಬಾಧೆಗೆ ಕಾರಣವೇ ಸಿಕ್ಕಿಲ್ಲ
47 ವರ್ಷದ ಹಿಂದೆ ಆರಂಭಗೊಂಡ ಈ ಹಳದಿ ರೋಗ ಅಡಿಕೆಗೆ ತಗಲಿರುವ ಲಕ್ಷಣ ಕಾಣಿಸುಕೊಳ್ಳುವುದು ನಾಶದ ಅಂಚಿನಲ್ಲಿ. ಆರಂಭಿಕ ರೋಗ ಲಕ್ಷಣ ಬಿಟ್ಟುಕೊಡದ ಕಾರಣ, ಇದಕ್ಕೆ ಪರಿಹಾರ ಏನು ಎಂಬ ಬಗ್ಗೆ ಉತ್ತರ ಸಿಕ್ಕಿಲ್ಲ. ಅಡಿಕೆ ಹಣ್ಣಾಗದಿರುವುದು, ಹಣ್ಣಾದ ಅಡಿಕೆ ಗುಣಮಟ್ಟ ಇಲ್ಲದಿರುವುದು, ಫಸಲು ಕಡಿಮೆ ಆಗುವುದು, ಕ್ರಮೇಣ ಎಲೆಯು ಹಳದಿ ಬಣ್ಣಕ್ಕೆ ತಿರುಗಿ ಅಡಿಕೆ ಗಿಡ ನಶಿಸುವುದು ಇದರ ಲಕ್ಷಣ. ರೋಗ ಸಾಂಕ್ರಾಮಿಕವಾಗಿದ್ದು, ಒಂದು ಗಿಡಕ್ಕೆ ತಗಲಿತೆಂದರೆ ಪರಿಸರದ ಗಿಡಗಳಿಗೂ ವ್ಯಾಪ್ತಿಸುತ್ತದೆ.
ಸಂಪಾಜೆ, ಅರಂತೋಡು, ತೊಡಿಕಾನ, ಆಲೆಟ್ಟಿ, ಮರ್ಕಂಜ, ಮಡಪ್ಪಾಡಿ, ಕಲ್ಮಕಾರುಗಳಲ್ಲಿ ಕಾಣಿಸಿಕೊಂಡಿರುವ ಹಳದಿ ರೋಗ, ಈಗ ನೆರೆಯ ಗ್ರಾಮಗಳಲ್ಲಿಯೂ ಗೋಚರಿಸಿದೆ. ಅಂದಾಜಿನ ಪ್ರಕಾರ ಒಟ್ಟು 5 ಸಾವಿರ ಎಕ್ರೆ ತೋಟ ನಾಶವಾಗಿದೆ. ಪುತ್ತೂರು ತಾಲೂಕಿನ ಕೆಲವು ಗ್ರಾಮಗಳ ತೋಟಗಳಲ್ಲಿ ಹಳದಿ ರೋಗದ ಲಕ್ಷಣ ಕಂಡು ಬಂದಿದೆ. ರೋಗ ಏನು ಅನ್ನುವ ಬಗ್ಗೆ ಇನ್ನು ಖಚಿತ ಉತ್ತರ ಬಂದಿಲ್ಲ. ವಿಟ್ಲದ ಸಿಪಿಸಿಆರ್‌ಐ ವಿಜ್ಞಾನಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅವರಿಂದಲೂ ರೋಗ ಅಥವಾ ನಿಯಂತ್ರಣಕ್ಕೆ ಬೇಕಾದ ಔಷಧ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಕಾಂಡದಲ್ಲಿ ಬೇರು ಹುಳ ರೋಗ ಕಾಣಿಸಿಕೊಂಡ ಸಂದರ್ಭದಲ್ಲಿ ಮೈಸೂರಿನಿಂದ ವಿಜ್ಞಾನಿಗಳು ಬಂದು ಪರಿಶೀಲಿಸಿದ್ದಾರೆ. ಆದರೆ ಯಾರೊಬ್ಬರಿಗೂ ರೋಗದ ನಿಖರ ಕಾರಣ ಕಂಡುಹಿಡಿಯಲಾಗಲಿಲ್ಲ. ಇದರ ನಿಯಂತ್ರಣಕ್ಕೂ ಸೂಕ್ತ ಕೀಟನಾಶಕ ಅಥವಾ ಔಷಧಿಗಳೂ ಬಂದಿಲ್ಲ. ಇದರಿಂದಾಗಿ ಅಡಿಕೆ ಬೆಳೆಗಾರರು ದಿಕ್ಕು ತೋಚದಾಗಿದ್ದಾರೆ.
ಬೆಳೆಯೂ ಇಲ್ಲ, ಪರಿಹಾರವೂ ಇಲ್ಲ :
ಹಳೆ ಅಡಿಕೆ ಮರ ಕಡಿದು ಹೊಸ ಗಿಡ ನಾಟಿ ಮಾಡಿದರೂ ಅದರಿಂದ ಪ್ರಯೋಜನ ಸಿಕ್ಕಿಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ಅಡಿಕೆ ಗಿಡ ಬೆಳವಣಿಗೆ ಕಂಡಿಲ್ಲ. ಇನ್ನು ಈ ರೋಗದಿಂದ ಕೃಷಿ ನಾಶಗೊಂಡಿದ್ದಕ್ಕೆ ಪರಿಹಾರ ಕೊಡಿ ಎಂದು ರೈತರು ವಿವಿಧ ಇಲಾಖೆ, ಸರಕಾರಗಳಿಗೆ ಬೇಡಿಕೆ ಇಟ್ಟಿದ್ದರೂ ಪರಿಹಾರ ಸಿಕ್ಕಿಲ್ಲ. ಇದರ ಮಧ್ಯೆ ಜೀವನ ನಿರ್ವಹಣೆಗಾಗಿ ಕೆಲವು ರೈತರು, ಪರ್ಯಾಯ ಬೆಳೆಯತ್ತ ಚಿಂತನೆ ನಡೆಸಿ, ತಾಳೆಬೆಳೆಯನ್ನು ನಾಟಿ ಮಾಡಿದ್ದಾರೆ.
ಕರಂದ್ಲಾಜೆ ರೈತರ ಧ್ವನಿಯಾಗ್ತಾರಾ?
ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲಿ 3 ಸಾವಿರ ಹೆಕ್ಟೇರಿಗಿಂತಲೂ ಅಧಿಕ ತೋಟ ಹಳದಿ ರೋಗದಿಂದ ನಾಶ ಹೊಂದಿದ್ದು, ರೈತರಿಗೆ ಎಕ್ರೆಗೆ 10 ಲಕ್ಷ ರೂ. ಪರಿಹಾರ ನೀಡಬೇಕು. 25 ಕೋ.ರೂ.ಪ್ಯಾಕೇಜ್ ಘೋಷಿಸಬೇಕು ಎಂಬಿತ್ಯಾದಿ ಬೇಡಿಕೆಗಳಿದ್ದು ಕೇಂದ್ರ ಕೃಷಿ ಸಚಿವೆ ಸುಳ್ಯ, ಪುತ್ತೂರು ಭಾಗದ ಕೃಷಿಕರ ಧ್ವನಿಯಾಗಿ ಇದಕ್ಕೊಂದು ಪರಿಹಾರ ಒದಗಿಸುತ್ತಾರೋ ಎಂದು ರೈತರು ಕಾಯುತ್ತಿದ್ದಾರೆ. ಈ ಹಿಂದೆ ಸಚಿವ ಎಸ್. ಅಂಗಾರರ ನೇತ್ರತ್ವದಲ್ಲಿ ನಿಯೋಗ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪರಿಗೂ ಈ ಮನವಿ ಸಲ್ಲಿಸಿದ್ದು ಅವರೂ ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾವ ಪ್ರಯೋಜನ ಆಗಿಲ್ಲ. ಈಗ ಜಿಲ್ಲೆಯ ನಾಯಕಿ ಕೇಂದ್ರ ಕೃಷಿ ಸಚಿವೆಯಾಗಿರುವ ಕಾರಣ ಮತ್ತೆ ನಿರೀಕ್ಷೆಗಳು ಗರಿಗೆದರಿವೆ.