Ad Widget .

ವರವ ಕೊಡೇ ವರಮಹಾಲಕ್ಷ್ಮೀ, ಹಬ್ಬ ಆಚರಣೆಯ ವೈದಿಕ ವಿಧಿವಿಧಾನಗಳು

ಶ್ರಾವಣ ಮಾಸ ಎಂದರೆ ಹಬ್ಬಗಳ ಮಾಸ. ಹೆಣ್ಣು ಮಕ್ಕಳಿಗಂತೂ ಪ್ರಿಯವಾದ ಮಾಸ. ಪ್ರತಿಯೊಂದು ಹಬ್ಬದಲ್ಲೂ ಚೆನ್ನಾಗಿ ಅಲಂಕಾರ ಮಾಡಿಕೊಂಡು ಸಡಗರ ಸಂಭ್ರಮದಿಂದ ಖುಷಿಪಡುತ್ತಾರೆ. ಈ ಎಲ್ಲಾ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ಹಬ್ಬ ಎಂದರೆ ಎಲ್ಲರಿಗೂ ಬಹಳ ಪ್ರಿಯವಾದುದು.

Ad Widget . Ad Widget .

ಹಿಂದೂ ಸಂಪ್ರದಾಯದಲ್ಲಿ ಸಂಪತ್ತಿನದ ಅಧಿದೇವತೆ ಎಂದೇ ಕರೆಯಲ್ಪಡುವ ವರಮಹಾಲಕ್ಷ್ಮಿ ವ್ರತವನ್ನು ಶ್ರಾವಣ ಮಾಸದ ಶುಕ್ಲದಲ್ಲಿ ಮಾಡುವುದರಿಂದ ಲಕ್ಷ್ಮಿಯ ಕೃಪೆಗೆ ಪಾತ್ರರಾಗಬಹುದು, ಇದಕ್ಕೆ ಬಹಳ ವಿಶೇಷ ಮಹತ್ವವಿದೆ ಎನ್ನಲಾಗುತ್ತದೆ. ಸಂಪತ್ತು, ಸಮೃದ್ಧಿ, ಕುಟುಂಬದ ಶ್ರೇಯೋಭೀವೃದ್ಧಿಗಾಗಿ ಶ್ರಾವಣ ಮಾಸದ ಪೂರ್ಣಿಮೆಯ ಮುನ್ನ ಅಥವಾ ಹುಣ್ಣಿಮೆಯ ಮೊದಲ ಶುಕ್ರವಾರ ಮಾಡುವ ವರಮಹಾಲಕ್ಷ್ಮೀ ವ್ರತವನ್ನು ಆಚರಿಸಲಾಗುತ್ತಿದೆ.

Ad Widget . Ad Widget .

ಭವಿಷ್ಯೋತ್ತರ ಪುರಾಣದ ಪ್ರಕಾರ, ಲಕ್ಷ್ಮಿಯು ಕ್ಷೀರ ಸಾಗರದಿಂದ ಅವತಾರ ತಾಳಿದಳೆಂದು ಹೇಳಲಾಗುತ್ತದೆ. ರಾಕ್ಷಸರು ಹಾಗೂ ದೇವತೆಗಳು ಅಮೃತ ಪಡೆಯುವುದಕ್ಕಾಗಿ ವಾಸುಕಿಯ ಸಹಾಯದೊಂದಿಗೆ ಮಂದರ ಪರ್ವತವನ್ನು ಕಡೆಯುತ್ತಿರುವಾಗ ಕ್ಷೀರಸಾಗರದಲ್ಲಿ ಪರಿಶುದ್ಧವಾಗಿ ಶ್ವೇತವರ್ಣದಲ್ಲಿ ಉದ್ಭವಿಸುತ್ತಾಳೆ ಲಕ್ಷ್ಮೀ.

ಹಾಗಾಗಿ ಈ ವರಮಹಾಲಕ್ಷ್ಮಿ ವ್ರತದ ದಿನ ತಾಯಿಗೆ ಶ್ವೇತವರ್ಣದ ಕೆಂಪು ಅಂಚಿನ ಸೀರೆಯನ್ನು ಉಡಿಸುತ್ತಾರೆ. ಲಕ್ಷ್ಮಿ ಎಂದರೆ ಶುದ್ಧತೆಯ ಸಂಕೇತವಾಗಿರುವುದರಿಂದ ಹಬ್ಬದ ದಿನದಂದು ಮುಂಜಾನೆ ಎದ್ದು ಮನೆಯನ್ನು ಶುಚಿಗೊಳಿಸಿ, ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಿ ಅಭ್ಯಂಜನವನ್ನು ಮಾಡಿ ಶುಭ್ರವಾದ ಬಟ್ಟೆಯನ್ನು ತೊಟ್ಟು ಮಡಿಯಲ್ಲಿ ನೈವೇದ್ಯವನ್ನು ತಯಾರಿಸಲಾಗುತ್ತದೆ.

ಸಣ್ಣ ಉಕ್ಕಿನ ಬಿಂದಿಗೆ ಅಥವ ಬೆಳ್ಳಿ ಚೆಂಬನ್ನು ಕಳಶದ ರೂಪದಲ್ಲಿ ಇಟ್ಟು ಅದರಲ್ಲಿ ನೀರನ್ನು ತುಂಬಿಸಿ ಅದಕ್ಕೆ ಸ್ವಲ್ಪ ಖರ್ಜೂರ ಹಾಗೂ ದ್ರಾಕ್ಷಿಯನ್ನು ಹಾಕಿ ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹರಡಿ ಅದರಲ್ಲಿ ಕಳಶವನ್ನು ಇಟ್ಟು, ಮಾವಿನ ಎಲೆ ಹಾಗೂ ವೀಳ್ಯೆದೆಲೆಯನ್ನು ಕಳಶದ ಸುತ್ತ ಜೋಡಿಸಿ ಅದರ ಮೇಲೆ ಅರಿಶಿನ ಹಚ್ಚಿದ ತೆಂಗಿನಕಾಯಿಯನ್ನು ಇಟ್ಟು ಅದಕ್ಕೆ ಸೀರೆ, ಒಡವೆಗಳೊಂದಿಗೆ ಅಲಂಕರಿಸುತ್ತಾರೆ.

ವರಮಹಾಲಕ್ಷ್ಮಿ ವ್ರತದ ಮಹತ್ವ
ವಿವಾಹಿತ ಮಹಿಳೆಯರು ಈ ಪವಿತ್ರ ವರಲಕ್ಷ್ಮಿ ವ್ರತವನ್ನು ಇಡೀ ಕುಟುಂಬಕ್ಕೆ, ವಿಶೇಷವಾಗಿ ತಮ್ಮ ಪತಿ ಮತ್ತು ಮಕ್ಕಳಿಗೆ ಆಶೀರ್ವಾದ ಪಡೆಯಲು ಲಕ್ಷ್ಮಿ ವ್ರತ ಮಾಡುತ್ತಾರೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಈ ಶುಭ ದಿನದಂದು ಲಕ್ಷ್ಮಿ ದೇವಿಯನ್ನು ಪೂಜಿಸುವುದು ಅಷ್ಟಲಕ್ಷ್ಮಿ – ಪ್ರೀತಿ, ಸಂಪತ್ತು, ಶಕ್ತಿ, ಶಾಂತಿ, ಕೀರ್ತಿ, ಆನಂದ, ಭೂಮಿ ಮತ್ತು ಕಲಿಕೆಯ ಎಂಟು ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸುವುದಕ್ಕೆ ಸಮಾನ ಎಂದು ನಂಬಲಾಗಿದೆ. ಶ್ರದ್ಧೆ ಹಾಗೂ ಭಕ್ತಿಯಿಂದ ವರಮಹಾಲಕ್ಷ್ಮೀ ವ್ರತವನ್ನು ಮಾಡಿದರೆ ಆರೋಗ್ಯ, ಸಂಪತ್ತು, ಸಂತೋಷ, ದೀರ್ಘಾಯಸ್ಸು, ಘನತೆ, ಯಶಸ್ಸುಗಳನ್ನು ಗಳಿಸಲು ಸಾಧ್ಯವಾಗುತ್ತದೆ. ವರಮಹಾಲಕ್ಷ್ಮೀ ವ್ರತವನ್ನು ಮಾಡುವುದೆಂದರೆ ಅಷ್ಟ ಲಕ್ಷ್ಮೀಯರ ಆರಾಧನೆ ಮಾಡಿದಂತೆ ಎನ್ನಲಾಗುತ್ತದೆ.

ದೇವಿ ವರಲಕ್ಷ್ಮೀ ಮಹಾಲಕ್ಷ್ಮೀಯ ರೂಪವಾಗಿದ್ದು, ಈಕೆ ಕ್ಷೀರಸಾಗರದಿಂದ ಎದ್ದು ಬಂದವಳೂ, ಬಣ್ಣ ಬಣ್ಣದ ವಸ್ತ್ರಗಳಿಂದ ಸುಂದರವಾಗಿ ಅಲಂಕೃತವಾಗಿರುವವಳು. ಈ ವ್ರತವನ್ನು ಜಾತಿ ಮತ್ತು ಪಂಥಗಳ ಭೇದವಿಲ್ಲದೆ ಎಲ್ಲರೂ ಆಚರಿಸಬಹುದು ಹಾಗೂ ಆಚರಿಸುತ್ತಾರೆ. ವರಲಕ್ಷ್ಮಿ ವ್ರತವನ್ನು ಆಂಧ್ರಪ್ರದೇಶ, ಕರ್ನಾಟಕ, ಉತ್ತರ ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳಲ್ಲಿ ಆಚರಿಸುವ ಪದ್ಧತಿ ಇದೆ.

ಎಲ್ಲಾ ಹಬ್ಬಗಳಿಗೆ ಇರುವಂತೆ ವರಮಹಾಲಕ್ಷ್ಮಿ ಪೂಜೆಗೂ ಒಂದು ಕಥೆಯಿದೆ.

ಚಾರುಮತಿ ಎಂಬ ಮಹಿಳೆಯ ಕಥೆ ಈ ಪೂಜೆಗೆ ಪ್ರೇರಣೆಯಾಗಿದೆ. ಒಮ್ಮೆ ಪಾರ್ವತಿಯು ತನ್ನ ಪತಿಯಾದ ಶಿವನಲ್ಲಿ ಒಂದು ಬೇಡಿಕೆ ಇಟ್ಟಳಂತೆ. ವಿವಾಹವಾದ ಬಳಿಕ ಓರ್ವ ಮಹಿಳೆ ತನ್ನ ಜೀವನಕ್ಕೆ ಬೇಕಾದ ಎಲ್ಲವನ್ನೂ ಹೇಗೆ ಪಡೆಯಬಹುದು? ಅಂದರೆ ಪತಿಯ ಪ್ರೇಮ, ಮಕ್ಕಳ ಸುಖ, ಮೊಮ್ಮಕ್ಕಳ ಸುಖ ಮತ್ತು ಸಾಕಷ್ಟು ಧನಸಂಪತ್ತು ಎಲ್ಲವನ್ನೂ ಹೇಗೆ ಪಡೆಯುವುದು ಎಂದು ಕೇಳಿದಳಂತೆ. ಅದಕ್ಕೆ ಉತ್ತರಿಸಿದ ಶಿವ ಯಾವ ಸಾಧ್ವಿ ವರಮಹಾಲಕ್ಷ್ಮಿಪೂಜೆಯನ್ನು ನೆರವೇರಿಸುತ್ತಾಳೆಯೋ ಆಕೆಗೆ ಜೀವನದಲ್ಲಿ ಎಲ್ಲಾ ಸುಖಗಳು ಲಭಿಸುತ್ತವೆ ಎಂದು ಹೇಳಿ ಚಾರುಮತಿಯ ಕಥೆಯನ್ನು ಪ್ರಾರಂಭಿಸಿದನಂತೆ.

ಮಗಧರಾಜ್ಯದಲ್ಲಿ ಚಾರುಮತಿ ಎಂಬ ಅತಿ ದೈವಭಕ್ತೆಯುಳ್ಳ ಮಹಿಳೆಯೊಬ್ಬಳಿದ್ದಳು. ತನ್ನ ಸದ್ಗುಣಗಳಿಂದ ಆಕೆ ಎಲ್ಲರಿಗೂ ಅಚ್ಚುಮೆಚ್ಚಿನವಳಾಗಿದ್ದಳು. ಆದರ್ಶ ಸತಿ, ಸೊಸೆ ಮತ್ತು ತಾಯಿಯ ಪಾತ್ರವನ್ನು ಅತಿ ನಿಷ್ಠೆಯಿಂದ ಪಾಲಿಸಿಕೊಂಡು ಬರುತ್ತಿದ್ದಳು. ಈಕೆಯ ಗುಣದಿಂದ ಪ್ರಸನ್ನಳಾದ ದೇವತೆ ಲಕ್ಷ್ಮೀ ಚಾರುಮತಿಯ ಕನಸಿನಲ್ಲಿ ಬಂದು ಶ್ರಾವಣ ಮಾಸದ ಹುಣ್ಣಿಮೆಯ ನಂತರದ ಶುಕ್ರವಾರ ತನ್ನನ್ನು ಪೂಜಿಸುವಂತೆ ತಿಳಿಸಿ, ಒಂದು ವೇಳೆ ಈ ಪೂಜೆ ಪರಿಪೂರ್ಣವಾದರೆ ಆಕೆಗೆ ಜೀವನದಲ್ಲಿ ಏನು ಬೇಕೋ ಅವೆಲ್ಲಾ ಸಿಗುವ ವರ ನೀಡುತ್ತೇನೆ ಎಂದು ವಾಗ್ದಾನ ನೀಡಿದಳು.

ಈ ಕೋರಿಕೆಯನ್ನು ಪರಿಪೂರ್ಣವಾಗಿ ನೆರವೇರಿಸಿದ ಚಾರುಮತಿ ತನ್ನೊಂದಿಗೆ ತನ್ನ ನೆರೆಹೊರೆಯ ಮತ್ತು ಆಪ್ತರನ್ನೂ ಸೇರಿಸಿಕೊಂಡಳು. ಪೂಜೆ ಪೂರ್ಣವಾದ ಬಳಿಕ ಆಕೆಯ ಜೊತೆಗಿದ್ದ ಎಲ್ಲಾ ಮಹಿಳೆಯರ ಮೈ ಮೇಲೆ ಬಂಗಾರದ ಆಭರಣಗಳು ಪ್ರತ್ಯಕ್ಷವಾಗಿದ್ದು ಮಾತ್ರವಲ್ಲ ಅವರ ಮನೆಗಳೂ ಚಿನ್ನದ್ದಾದವು. ಈ ಎಲ್ಲಾ ಮಹಿಳೆಯರು ತಮ್ಮ ಜೀವಮಾನದುದ್ದಕ್ಕೂ ಪೂಜೆಯನ್ನು ನೆರವೇರಿಸುತ್ತಾ ಉತ್ತಮ ಜೀವನವನ್ನು ಪಡೆದರು.

ಅಂದಿನಿಂದ ವರಮಹಾಲಕ್ಷ್ಮಿ ಪೂಜೆಯನ್ನು ವಿವಾಹಿತ ಮಹಿಳೆಯರು ನೆರವೇರಿಸುತ್ತಾ ಬಂದಿದ್ದು ಬಂಗಾರಕ್ಕೂ ಮಿಗಿಲಾದ ಆರೋಗ್ಯ ಮತ್ತು ನೆಮ್ಮದಿಗಳನ್ನು ಉಡುಗೊರೆಯಾಗಿ ಪಡೆದುಕೊಳ್ಳುತ್ತಾ ಬಂದಿದ್ದಾರೆ.

Leave a Comment

Your email address will not be published. Required fields are marked *