ಕಾಬೂಲ್: ತಾಲಿಬಾಲಿಗಳು ರಾಜಧಾನಿ ಕಾಬೂಲ್ ಸೇರಿದಂತೆ ಬಹುತೇಕ ಅಫ್ಘಾನಿಸ್ತಾನವನ್ನೇ ವಶಕ್ಕೆ ಪಡೆದುಕೊಂಡಿದೆ. ಕಾಬೂಲ್ನಿಂದ ಅಲ್ಲಿನ ಅಧ್ಯಕ್ಷ ಅಶ್ರಫ್ ಘನಿ ಸೇರಿದಂತೆ ಬಹುತೇಕ ನಾಯಕರು ಪಲಾಯನಗೈದಿದ್ದಾರೆ. ಅಶ್ರಫ್ ಘನಿ ದೇಶವನ್ನೇ ತೊರೆದಿದ್ದಾರೆ. ಇದೆಲ್ಲದರ ಬೆನ್ನಲ್ಲೇ ತಾಲಿಬಾನಿಗಳು ಸರ್ಕಾರ ರಚಿಸಲು ಮುಂದಾಗಿದ್ದಾರೆ.
ಹೀಗಿರುವಾಗಲೂ ಅಫ್ಘಾನಿಸ್ತಾನದ ಉಪಾಧ್ಯಕ್ಷ ಅಮ್ರುಲ್ಲಾಹ್ ಸಾಲೆಹ್ ಈಗಲೂ ಸರ್ಕಾರ ನಮ್ಮ ಕೈನಲ್ಲಿದೆ ಎಂಬಂತೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ಅಫ್ಘಾನಿಸ್ತಾನದ ಸಂವಿಧಾನದ ಪ್ರಕಾರ ಅಧ್ಯಕ್ಷರ ಗೈರು, ಪಲಾಯನ, ರಾಜೀನಾಮೆ ಅಥವಾ ಸಾವಿನ ನಂತರ ಉಪಾಧ್ಯಕ್ಷರು ಅಧ್ಯಕ್ಷರಾಗಿ ಭಡ್ತಿ ಹೊಂದುತ್ತಾರೆ. ಸದ್ಯ ನಾನು ದೇಶದ ಒಳಗೇ ಇದ್ದೇನೆ, ಮತ್ತು ನಾನು ಈಗ ದೇಶದ ಉಸ್ತುವಾರಿ ಅಧ್ಯಕ್ಷನಾಗಿದ್ದೇನೆ. ನಾನು ಎಲ್ಲ ನಾಯಕರನ್ನೂ ಸಂಪರ್ಕಿಸಿ ಅವರ ಬೆಂಬಲ ಹಾಗೂ ಒಮ್ಮತ ಸಂಗ್ರಹಿಸುತ್ತಿದ್ದೇನೆ ಎಂದಿದ್ದಾರೆ.
ಈ ನಡುವೆ ತಾಲಿಬಾನ್ ಸಂಘಟನೆ ಪ್ರಕಟಣೆ ಹೊರಡಿಸಿದ್ದು, ಕೆಲವು ವಿದ್ಯಾಮಾನಗಳ ಬಗ್ಗೆ ಕ್ಷಮೆ ಇರಲಿ, ಎಲ್ಲರನ್ನೂ ಕ್ಷಮೆ ಕೇಳುತ್ತೇವೆ. ನೀವು ನಿಮ್ಮ ದಿನನಿತ್ಯದ ಜೀವನವನ್ನು ಪ್ರಾರಂಭಿಸಬೇಕು. ಪ್ರತಿದಿನದ ಜೀವನದಂತೆ ಮತ್ತೆ ನಿಮ್ಮ ಜೀವನ ಪ್ರಾರಂಭ ಮಾಡಿ, ಸರ್ಕಾರಿ ಉದ್ಯೋಗಿಗಳು ಮತ್ತೆ ತಮ್ಮ ಕೆಲಸಕ್ಕೆ ಮರಳುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದೆ.
ತಾಲಿಬಾನ್ ಉಗ್ರಗಾಮಿಗಳು ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನನ್ನು ವಶಪಡಿಸಿಕೊಂಡ ನಂತರ ಅಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರಿ ಮತ್ತು ಇತರ ಅಧಿಕಾರಿಗಳನ್ನು ಭಾರತೀಯ ವಾಯುಪಡೆಯ ವಿಮಾನದಲ್ಲಿ ತುರ್ತಾಗಿ ಭಾರತಕ್ಕೆ ವಾಪಸ್ ಕರೆತರಲಾಗುತ್ತಿದೆ.