ಭೋಪಾಲ್ : ಮಧ್ಯಪ್ರದೇಶದ ಸಿಂಗ್ರಾಲಿ ಜಿಲ್ಲೆಯಲ್ಲಿ 60 ವರ್ಷ ವಯಸ್ಸಿನ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹದಿನೆಂಟು ವರ್ಷಕ್ಕಿಂತ ಕೆಳಗಿನ ಇಬ್ಬರು ಸೇರಿದಂತೆ ಐದು ಮಂದಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಸಿಂಗ್ರಾಲಿ ರೈಲ್ವೆ ಕ್ರಾಸಿಂಗ್ ಬಳಿ ರವಿವಾರ ರಾತ್ರಿ ಈ ಘಟನೆ ನಡೆದಿದ್ದು, ಮಹಿಳೆ ತನ್ನ ಮನೆಗೆ ಹೋಗುತ್ತಿದ್ದಾಗ ಪಾನಮತ್ತರಾಗಿದ್ದ ಐದು ಮಂದಿ ಮಹಿಳೆಯನ್ನು ಪೊದೆಗೆ ಎಳೆದೊಯ್ದು ಅತ್ಯಾಚಾರ ಎಸಗಿದರು ಎಂದು ಆಪಾದಿಸಲಾಗಿದೆ.
ಮಹಿಳೆ ಹತ್ತಿರದ ಪೊಲೀಸ್ ಠಾಣೆಗೆ ಬಂದು ವಿಷಯ ಮುಟ್ಟಿಸುವ ವೇಳೆಗೆ ಆರೋಪಿಗಳು ಪರಾರಿಯಾಗಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಐದು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು ಎಂದು ಹೆಚ್ಚುವರಿ ಎಸ್ಪಿ ಅನಿಲ್ ಸೋನ್ ಕರ್ ಹೇಳಿದ್ದಾರೆ.