Ad Widget .

ಭಯ, ಆತಂಕಕ್ಕೆ ಬಲಿಯಾದ ದಂಪತಿ| ವಿಧಿಯೇ….ಈ ಸಾವು ನ್ಯಾಯವೇ…?

ಮಂಗಳೂರು: ಕೊರೊನಾ ಭಯದಲ್ಲಿ ಸಾವಿಗೆ ಶರಣಾಗಿರುವ ದಂಪತಿಯ ಪ್ರಕರಣ ಕರಾವಳಿಯಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿದೆ. ಕೊರೊನಾ ಸೋಂಕಿನ ಎರಡನೇ ಅಲೆಯಲ್ಲಿ ಉಸಿರಾಟದ ತೊಂದರೆ, ಬ್ಲಾಕ್ ಫಂಗಸ್ ಕಂಡುಬಂದಿದ್ದರೂ, ಮೂರೇ ತಿಂಗಳಲ್ಲಿ ಸೋಂಕಿನ ತೀವ್ರತೆ ಕಡಿಮೆಯಾಗಿತ್ತು. ಸೋಂಕು ಕಡಿಮೆಗೊಂಡು ಜನಜೀವನ ಸಹಜಸ್ಥಿತಿಗೆ ಬರುತ್ತಿರುವಾಗಲೇ ದಂಪತಿ ಅನ್ಯಾಯವಾಗಿ ಸಾವು ಕಂಡಿರುವುದು ಕರಾವಳಿ‌ ಮುಮ್ಮಲ ಮರುಗುವಂತೆ ಮಾಡಿದೆ.

Ad Widget . Ad Widget .

ಪಡುಬಿದ್ರಿ ಮೂಲದ ರಮೇಶ್ ಸುವರ್ಣ (45) ಉದ್ಯಮಿಯಾಗಿದ್ದರೂ ಕೊರೊನಾ ಕಾರಣದಿಂದ ಅವರಿಗೇನೂ ದೊಡ್ಡ ನಷ್ಟ ಆಗಿರಲಿಲ್ಲ. ಮದುವೆಯಾಗಿ 21 ವರ್ಷ ಆಗಿದ್ದರೂ ಮಕ್ಕಳಾಗಿಲ್ಲ ಎಂಬ ಕೊರಗಿನ ಮಧ್ಯೆ ಪತ್ನಿಯ ಅನಾರೋಗ್ಯದ ಬಗ್ಗೆ ಚಿಂತೆ ಮಾಡಿದ್ದಾರೆ. ಆಕೆಯಿಲ್ಲದೇ ಬದುಕಲು ಸಾಧ್ಯವಿಲ್ಲ. ಆಕೆಗೆ ಕೊರೊನಾ ಬಂದಿದ್ದು ಆಸ್ಪತ್ರೆಗೆ ದಾಖಲಿಸಿದರೂ ಬದುಕಲ್ಲ ಎಂದು ಆತುರದ ನಿರ್ಧಾರ ಕೈಗೊಂಡು ಸಾವಿಗೆ ಶರಣಾಗಿದ್ದಾರೆ.

Ad Widget . Ad Widget .

ಸಾಯುವುದಕ್ಕಾಗಿ ನಿದ್ದೆ ಮಾತ್ರೆ ಸೇವಿಸಿದ್ದರೂ ಆಕೆ ಸಾಯಲಿಲ್ಲ. ರಾತ್ರಿ ಒಮ್ಮೆ ಪ್ರಜ್ಞೆ ತಪ್ಪಿದ ಸ್ಥಿತಿಗೆ ಹೋಗಿದ್ದಳು. ಆನಂತರವೂ ಸಾಯಲಿಲ್ಲ ಎಂದು ನೇಣಿಗೆ ಶರಣಾಗಲು ಯತ್ನಿಸಿದ್ದಾಳೆ. ಆದರೆ, ಬಟ್ಟೆಯ ಶಾಲು ಕಡಿದುಕೊಂಡು ಅರ್ಧ ಜೀವಕ್ಕೆ ಹೋಗಿದ್ದಳು. ಆಮೇಲೆ ಬೇರೆ ಶಾಲನ್ನು ಹಾಕಿ, ಸಾವಿಗೀಡಾಗಿದ್ದಾಳೆ. ಸಾಯುವುದಕ್ಕೂ ಇಷ್ಟು ಕಷ್ಟ ಇದೆಯೆಂದು ಗೊತ್ತಿರಲಿಲ್ಲ ಎಂದು ಪೊಲೀಸ್ ಕಮಿಷನರ್ ಗೆ ಕಳಿಸಿರುವ ಆಡಿಯೋದಲ್ಲಿ ರಮೇಶ್ ಸುವರ್ಣ ಅತ್ತುಕೊಂಡು ಹೇಳಿರುವುದು ದಾಖಲಾಗಿದೆ.

ಅವಳಿಗೆ ಕೊರೊನಾ ಬಂದು ಏನೆಲ್ಲಾ ಕಷ್ಟಪಡುತ್ತಿದ್ದಾಳೆ, ನೋಡಿದ್ದೇನೆ. ಒಂದೂವರೆ ದಿನ ಆಯ್ತು ಊಟ ಮಾಡದೆ. ರಾತ್ರಿಯಲ್ಲಿ ನಿದ್ದೆ ಬರದೆ ವೆರಾಂಡಾಕ್ಕೆ ಹೋಗಿ ಗಾಳಿ ಸೇವಿಸುತ್ತಿದ್ದಳು. ಉಸಿರುಕಟ್ಟಿದ ರೀತಿ ಮಾಡುತ್ತಿದ್ದಳು. ಇದರಿಂದ ತುಂಬ ಬೇಸರವಾಗಿತ್ತು. ನಾವು ಹೀಗೆ ಸಾಯುತ್ತಿರುವುದು ತಪ್ಪು. ಇಂಥದನ್ನು ನಾನು ಯಾವತ್ತು ಒಪ್ಪುತ್ತಿರಲಿಲ್ಲ. ಆದರೆ, ಈಗಿನ ಪರಿಸ್ಥಿತಿ ನಮಗೆ ಇಂಥಾ ಸ್ಥಿತಿ ತಂದಿಟ್ಟಿದೆ. ಆಕೆಯ ಪ್ರಾಣ ಹೋಗಿದೆ, ಇನ್ನು ನಾನೂ ಸಾಯುತ್ತೇನೆ. ಆಕೆಯಿಲ್ಲದಿದ್ದರೆ ನಾನು ಹೇಗಿರೋದು, ನಾನಿಲ್ಲದಿದ್ದರೆ ಆಕೆ ಹೇಗೆ ಇರೋದು ಎಂಬ ಚಿಂತೆಯಲ್ಲೇ ಇದ್ದೆವು. ಹಾಗಾಗಿ ಒಟ್ಟಿಗೆ ಸಾಯಲು ನಿರ್ಧರಿಸಿದೆವು. ಆದರೆ, ನಮ್ಮನ್ನು ಹಿಂದು ಸಂಪ್ರದಾಯದಲ್ಲೇ ಅಂತ್ಯಕ್ರಿಯೆ ಮಾಡಿ ಎಂದು ಹಿಂದು ಸಂಘಟನೆಯ ಮುಖಂಡರಲ್ಲಿ ಮನವಿ ಮಾಡಿದ್ದಾರೆ.

ಐದಾರು ವಾಯ್ಸ್ ಮೆಸೇಜನ್ನು ಪೊಲೀಸ್ ಕಮಿಷನರ್ ಒಬ್ಬರಿಗೇ ಕಳಿಸಿದ್ದಾರೆ. ಆನಂತರ ಶರಣ್ ಪಂಪ್ವೆಲ್ ಮತ್ತು ಸತ್ಯಜಿತ್ ಸುರತ್ಕಲ್ ಅವರಿಗೂ ವಾಯ್ಸ್ ಮೆಸೇಜ್ ಮಾಡಿದ್ದು, ಅಂತ್ಯಕ್ರಿಯೆ ನಡೆಸುವಂತೆ ಕೇಳಿಕೊಂಡಿದ್ದಾರೆ. ಸುದೀರ್ಘ ಸಂದೇಶದ ಉದ್ದಕ್ಕೂ ನೋವು, ದುಃಖ ಮತ್ತು ಕೊರೊನಾದ ಬಗೆಗಿರುವ ಭಯವನ್ನು ಹೇಳಿಕೊಂಡಿದ್ದಾರೆ. ಅಲ್ಲದೆ, ಕೊರೊನಾ ಸೋಂಕು ಆವರಿಸಿಕೊಳ್ಳುತ್ತಿದೆ ಎನ್ನುವ ಚಿಂತೆಯಿಂದಲೇ ರಮೇಶ್ ಸುವರ್ಣ ಸ್ವತಃ ಉದ್ವೇಗಕ್ಕೊಳಗಾಗಿ ಉಸಿರಾಟದ ಸಮಸ್ಯೆಗೆ ಈಡಾಗಿದ್ದರು ಎಂಬುದು ಅವರ ಮಾತುಗಳಲ್ಲಿ ಕಂಡುಬರುತ್ತಿದ್ದವು.

ಕೊರೊನಾ ಭಯ ಮಾತ್ರ, ಸೋಂಕು ಇರಲಿಲ್ಲ !

ದುರಂತವೆಂದರೆ ಯಾವ ಕೊರೊನಾ ಭಯದಿಂದ ಸಾಯಲು ನಿರ್ಧರಿಸಿದ್ದರೋ, ಮರಣೋತ್ತರ ಪರೀಕ್ಷೆಯಲ್ಲಿ ಅವರಿಬ್ಬರಿಗೂ ಕೊರೊನಾ ಸೋಂಕೇ ಇರಲಿಲ್ಲ ಎಂಬ ವರದಿಯನ್ನು ವೈದ್ಯರು ನೀಡಿದ್ದಾರೆ. ಶವಗಳನ್ನು ವೆನ್ಲಾಕ್ ಆಸ್ಪತ್ರೆಗೆ ತಂದು ಪೋಸ್ಟ್ ಮಾರ್ಟಂ ನಡೆಸಲಾಗಿದೆ. ಹಿಂದು ಸಂಘಟನೆಯ ಶರಣ್ ಪಂಪ್ವೆಲ್ ಸೇರಿದಂತೆ ಹಲವಾರು ಮಂದಿ ಬೆಳಗ್ಗೆಯೇ ಚಿತ್ರಾಪುರಕ್ಕೆ ಬಂದಿದ್ದರು. ಆನಂತರ ಕೋವಿಡ್ ನೆಗೆಟಿವ್ ಎಂದು ವರದಿ ಬರುತ್ತಲೇ ರಮೇಶ್ ಸುವರ್ಣ ಮನೆಯವರು ಕೂಡ ವೆನ್ಲಾಕ್ ಆಸ್ಪತ್ರೆಗೆ ಬಂದಿದ್ದರು. ಬಳಿಕ ಎಲ್ಲರ ಸಮ್ಮುಖದಲ್ಲಿ ಹಿಂದೂ ವಿಧಿವಿಧಾನದ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಅನ್ಯಾಯವಾಗಿ ಸಾವಿಗೆ ಶರಣಾಗಿರುವ ಈ ದುರಂತ ದಂಪತಿಯನ್ನು ಕಂಡು ಈ ಸಾವು ನ್ಯಾಯವೇ? ಎಂದು ಕೇಳುವಂತಾಗಿದೆ.

Leave a Comment

Your email address will not be published. Required fields are marked *