ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕದಲ್ಲಿ ಸ್ವಾತಂತ್ರ್ಯ ರಥಯಾತ್ರೆಯನ್ನು ಎಸ್‌ಡಿಪಿಐ ಕಾರ್ಯಕರ್ತರು ತಡೆದ ವಿಚಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಾದದ ಕಿಡಿ ಹೊತ್ತಿಸಿದೆ. ಸ್ವಾತಂತ್ರ್ಯ ರಥ ಯಾತ್ರೆಯಲ್ಲಿದ್ದ ಸಾವರ್ಕರ್ ಭಾವಚಿತ್ರವನ್ನು ಹರಿಯಲು ಯತ್ನಿಸಿದ ಎಸ್‌ಡಿಪಿಐ ವಿರುದ್ಧ ಹಿಂದೂ ಸಂಘಟನೆಗಳು ತೊಡೆ ತಟ್ಟಿದ್ದು, ಕಬಕ ಜಂಕ್ಷನ್‌ನಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ.
ಪುತ್ತೂರು ತಾಲೂಕಿನ ಕಬಕ ಜಂಕ್ಷನ್‌ನಲ್ಲಿ ಹಿಂದೂಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಸೇರಿದ್ದು, ಸಾವರ್ಕರ್ ಫೋಟೋ ಹಿಡಿದು, ಎಸ್‌ಡಿಪಿಐ ವಿರುದ್ಧ ಘೋಷಣೆ ಕೂಗಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಎಸ್‌ಡಿಪಿಐಯನ್ನು ಬ್ಯಾನ್ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೇ ಚುನಾವಣೆ ಪ್ರಕ್ರಿಯೆಯಿಂದಲೇ ಎಸ್‌ಡಿಪಿಐ ಪಕ್ಷವನ್ನು ತೆಗೆದುಹಾಕಲು ಚುನಾವಣಾ ಆಯೋಗವನ್ನು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಅಲ್ಲದೇ ಬಂಧಿತ ಎಸ್‌ಡಿಪಿಐ ಕಾರ್ಯಕರ್ತರ ವಿರುದ್ಧ ಜಾಮೀನು ರಹಿತ ದೇಶದ್ರೋಹದ ಪ್ರಕರಣವನ್ನು ದಾಖಲಿಸಬೇಕೆಂದು ಹಿಂದೂಪರ ಕಾರ್ಯಕರ್ತರು ಒತ್ತಾಯ ಮಾಡಿ ಪ್ರತಿಭಟಿಸಿದ್ದಾರೆ.
ಸ್ವಾತಂತ್ರ್ಯ ರಥದಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರರ ಚಿತ್ರದ ಬ್ಯಾನರ್‌ನಲ್ಲಿದ್ದ ವೀರ್ ಸಾವರ್ಕರ್ ಫೋಟೋವನ್ನು ಹರಿದು, ಅಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರ ಅಳವಡಿಸಲು ಯತ್ನಿಸಿದ ಎಸ್‌ಡಿಪಿಐ ಕಾರ್ಯಕರ್ತರಿಗೆ ಸೆಡ್ಡು ಹೊಡೆಯಲು ತೀರ್ಮಾನಿಸಿರುವ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು, ಇದೇ ಆಗಸ್ಟ್ 17ರಂದು ಬೃಹತ್ ವೀರ್ ಸಾವರ್ಕರ್ ರಥಯಾತ್ರೆ ನಡೆಸಲು ತೀರ್ಮಾನಿಸಿದೆ. ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ನೇತೃತ್ವದಲ್ಲಿ ಸಾವರ್ಕರ್ ರಥಯಾತ್ರೆ ನಡೆಯಲಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆಯಿದೆ.
ಈ ಹಿನ್ನಲೆಯಲ್ಲಿ ಪುತ್ತೂರಿನಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಳ ಮಾಡಲಾಗಿದ್ದು, ಕೆಎಸ್‌ಆರ್‌ಪಿ ಪಡೆಗಳನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನೆವಾನೆ ಪುತ್ತೂರಿನಲ್ಲೇ ಬೀಡು ಬಿಟ್ಟಿದ್ದಾರೆ. ಭದ್ರತೆಗೆ ಇನ್ನೂ ಹೆಚ್ಚಿನ ಪೊಲೀಸರನ್ನು ನಿಯೋಜಿಸುವ ಸಾಧ್ಯತೆಗಳಿವೆ.