Ad Widget .

ಇಂದಿನಿಂದಲೇ ನವಕರ್ನಾಟಕ ನಿರ್ಮಾಣದತ್ತ ಹೆಜ್ಜೆ – ನೂತನ ಯೋಜನೆಗಳನ್ನು ಘೋಷಿಸಿದ ಸಿಎಂ ಬೊಮ್ಮಾಯಿ

Ad Widget . Ad Widget .

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ಬಾರಿ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದ್ದು ರಾಜಧಾನಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಜನತೆಯನ್ನು ಉದ್ದೇಶಿಸಿ‌ ಮಾತನಾಡಿದರು.

Ad Widget . Ad Widget .

ಪ್ರಜಾಪ್ರಬುತ್ವ ಯಶಸ್ವಿಯಾಗಲು ಸಂವಿಧಾನ ಮೂಲ ಕಾರಣವಾಗಿದೆ.
ಇಂದಿನಿಂದ ನವ ಕರ್ನಾಟಕ ನಿರ್ಮಾಣ ಆರಂಭವಾಗುತ್ತದೆ. ಹೊಸ ಚಿಂತನೆ, ಹೊಸ ದಾರಿ, ಹೊಸ ದಿಕ್ಸೂಚಿ, ಮಾನವ ಸಂಪನ್ಮೂಲ ಬಳಸಿಕೊಂಡು ಹೊಸ ತಂತ್ರಜ್ಞಾನ ಬಳಕೆ ಮಾಡಿ, ವೈಜ್ಞಾನಿಕವಾಗಿ ಕೃಷಿ, ಸೇವಾ ವಲಯವನ್ನ ಮಾಡಲು ಸಂಕಲ್ಪ ಮಾಡಿದ್ದೇವೆ. ಆಳುವುದು ಬೇರೆ ಆಡಳಿತ ಮಾಡುವುದು ಬೇರೆ. 11ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರು ಹೇಳಿದ ಮಾತಿದು. ಇವತ್ತಿನ ಕಾಲದಲ್ಲಿ ಆಳುವವರು ಆಡಳಿತ ಮಾಡುತ್ತಿದ್ದಾರೆ. ಆಡಳಿತ ಮಾಡುವವರು ಆಳುತ್ತಿದ್ದಾರೆ. ನಾಡಿನ ಕೊನೆ ಹಂತದ ಜನತೆಗೆ ನಮ್ಮ ಕಾರ್ಯಕ್ರವನ್ನು ಮುಟ್ಟುವರೆಗೆ ನಾವು ಕೆಲಸ ಮಾಡುತ್ತೇವೆಂದರು.

ನಾಡಿನ ಕಟ್ಟ ಕಡೆಯ ಕುಟುಂಬ, ಪ್ರತಿಯೊಬ್ಬರ ಬದುಕು ಬೆಳವಣಿಗೆ ಆಗಬೇಕು, ಸುಖ ಶಾಂತಿ ಆರೋಗ್ಯ ಸಿಗಬೇಕೆಂಬ ಸದ್ದುದ್ದೇಶದಿಂದ ಕೆಲಸ ಮಾಡುತ್ತಿದ್ದೇನೆ. ಇನ್ನು 20 ತಿಂಗಳು ಮಾತ್ರ ಅವಕಾಶ ಇದೆ ಎಂಬುದು ನನಗೆ ತಿಳಿದಿದೆ. ಇದನ್ನೆಲ್ಲ ಮಾಡಲು ದೀರ್ಘಾವಧಿ ಸಮಯ ಬೇಕು. ಅಲ್ಪಾವಧಿಯಲ್ಲಿ ಏನು ಕಾರ್ಯಕ್ರಮ ಕೊಡಬೇಕು ಅದನ್ನ ಮಾಡುತ್ತಿದ್ದೇವೆ. ಜನರು ಕಚೇರಿಗಳು ಅಲೆಯದಂತೆ ಮಾಡಬೇಕು, ತಾಲೂಕು ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿ ಜನ ಅಲೆಯದಂತೆ ಮಾಡುವುದು ನಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದರು.

ಕೊರೋನಾ ಸಾಂಕ್ರಾಮಿಕ ನಮಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಸಂದರ್ಭದಲ್ಲಿ ನಮ್ಮ ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರನ್ನ ನಾನು ನೆನಪು ಮಾಡಿಕೊಳ್ಳುತ್ತೇನೆ. ಕೋವಿಡ್ ನಿರ್ವಹಣೆಗೆ ಸಾಕಷ್ಟು ಅನುದಾನ ನೀಡಿದರು. ಅವರ ಅಭಿವೃದ್ಧಿ ಕಾರ್ಯಕ್ರಮ ನಮಗೆ ಮಾರ್ಗದರ್ಶನವಾಗಿದೆ. ನಾನು ಅಧಿಕಾರಕ್ಕೆ ಬಂದ ಕೂಡಲೇ ಕೋವಿಡ್ ನಿರ್ವಹಣೆಗೆ ಹೆಚ್ಚಿನ ಮಹತ್ವ ಕೊಟ್ಟಿದ್ದೇನೆ.

ಕೇರಳ ಮಹಾರಾಷ್ಟ್ರದಲ್ಲಿ ಹೆಚ್ಚಿನ ಸೋಂಕು ಇದೆ, ಹೀಗಾಗಿ ನಾನೇ ಗಡಿ ಜಿಲ್ಲೆಗಳಿಗೆ ಹೋಗಿ ಪರಿಶೀಲನೆ ನಡೆಸಿದ್ದೇನೆ. ಜನತೆ ಕೋವಿಡ್ ನಿಯಮ ಪಾಲಿಸಿದ್ರೆ, ನಾವು ತಂತ್ರಜ್ಞಾನ ಬಳಸಿಕೊಂಡು ನಮ್ಮ ನಾಡಿನ ಜನತೆಯನ್ನ ರಕ್ಷಿಸುತ್ತೇವೆ.

ರೈತ ವಿಧ್ಯಾನಿಧಿ ಕಾರ್ಯಕ್ರಮವನ್ನು ಘೋಷಿಸಿದ್ದೇವೆ. ರೈತರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ವಾರ್ಷಿಕ ರೂ. 2500 ಗಳಿಂದ ರೂ.11 ಸಾವಿರ ವರೆಗೆ ವಿದ್ಯಾರ್ಥಿ ವೇತನ ನೀಡಲು ಆದೇಶ ಮಾಡಿದ್ದೇನೆ. ಇದರಿಂದ 17 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ.

ನಮ್ಮ ತಾಯಿಯಂದಿರ ಶಕ್ತಿ ನಮ್ಮ ನಾಡು ಕಟ್ಟುವಲ್ಲಿ ಪ್ರಮುಖ ಪಾತ್ರ ಇದೆ. ಅವರಿಗೆ ನಮ್ಮ ಸರ್ಕಾರ ಮೊದಲ ಆದ್ಯತೆ ನೀಡಲಿದೆ. ಎಸ್ಸಿ-ಎಸ್ಟಿ ಮಹಿಳೆಯರ ಜೊತೆಗೆ ಶ್ರೀ ಶಕ್ತಿಯನ್ನ ಬಲಪಡಿಸುವ ಕೆಲಸ ಮಾಡ್ತೇವೆಂದು ಹೇಳಿದರು.

ಕೈಗಾರಿಕೆಯಲ್ಲಿ ರಾಜ್ಯವನ್ನು ನಂಬರ್ 1 ಸ್ಥಾನಕ್ಕೇರಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತದೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ತಂದು ಯುವಕರಿಗೆ ಉದ್ಯೋಗ ಒದಗಿಸುವ ಕೆಲಸ ಮಾಡುತ್ತೇವೆ. ನಾಡಿನ ನೆಲ-ಜಲದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ,

ಹಪ್ಪರ್ ಕೃಷ್ಣ ಯೋಜನೆಗೆ ಕಾನೂನಿನ ತೊಡಕಿದೆ ಅದನ್ನು ನಿವಾರಿಸುತ್ತೇನೆ. ಮೇಕೆದಾಟು ಯೋಜನೆ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಚರ್ಚೆ ಮಾಡುತ್ತೇನೆ. ಕಾನೂನಿನ ತೊಡಕನ್ನು ಆದಷ್ಟು ಬೇಗ ನಿವಾರಿಸಿ ಯೋಜನೆ ಜಾರಿಗೊಳಿಸಿ ಕುಡಿಯುವ ನೀರು ಒದಗಿಸುವ ಕೆಲಸ ಮಾಡುತ್ತೇನೆ. ಮಹದಾಯಿ ಯೋಜನೆಯನ್ನು ಜಾರಿಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆಂದು ಹೇಳಿದರು.

ಅಮೃತ ಗ್ರಾಮೀಣ ವಸತಿ ಯೋಜನೆ ಅಡಿಯಲ್ಲಿ ಸರ್ವರಿಗೂ ವಸತಿಯನ್ನು ನೀಡುವ ಯೋಜನೆ ನಮ್ಮ ಸರ್ಕಾರ ಜಾರಿಗೆ ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಯಾರು ಸಹ ವಸತಿ ರಹಿತರಾಗಿರಬಾರದು. 750 ಗ್ರಾಮ ಪಂಚಾಯಿತಿಗಳಲ್ಲಿ ಸರ್ವರಿಗೂ ವಸತಿ ಕಲ್ಪಿಸಲಾಗುವುದು ಎಂದು ತಿಳಿಸಿದರು.

ರೈತ, ನೇಕಾರ, ಮೀನುಗಾರರ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ವಿಶೇಷ ಪ್ರೋತ್ಸಾಹ ನೀಡಲು 750 ಅಮೃತ ರೈತ ಉತ್ಪಾದಕ ಸಂಸ್ಥೆಗಳ ಸ್ಥಾಪನೆ ಮಾಡಲಾಗುವುದು ಮತ್ತು ಆಯ್ದ 75 ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಚ ಮತ್ತು ಸೌಂದರ್ಯ ಕಾಪಾಡಿಕೊಳ್ಳಲು ಅಮೃತ ನಿರ್ಮಲ ನಗರ ಯೋಜನೆ ರೂಪಿಸಿ, ಪ್ರತಿ ಸ್ಥಳೀಯ ಸಂಸ್ಥೆಗೆ 1 ಕೋಟಿ ರೂ.ನಂತೆ 75 ಕೋಟಿ ರೂ ಒದಗಿಸಲಾಗುವುದು ಎಂದರು.
ಬದಲಾವಣೆಯನ್ನು ರಾಜ್ಯದ ಜನತೆ ಕೆಲವೇ ತಿಂಗಳುಗಳಲ್ಲಿ ನೋಡುತ್ತಾರೆ. ಕೆಲವೇ ದಿನಗಳಲ್ಲಿ ಆ ಬದಲಾವಣೆ ಆರಂಭ ಆಗುತ್ತೆ. ಪ್ರತಿಯೊಬ್ಬ ಪ್ರಜೆಯ ಸಲಹೆಯನ್ನು ಪಡೆದು ನಾಡು ಕಟ್ಟುವ ಕೆಲಸ ಮಾಡುತ್ತೇವೆ. ದಿನಾಚರಣೆಯ ಈ ಅಮೃತ ಮಹೋತ್ಸವ ಸಮಾರಂಭದಲ್ಲಿ ನಿಮ್ಮ ಬದುಕು ಬಂಗಾರವಾಗಲಿ ಎಂದರು.

Leave a Comment

Your email address will not be published. Required fields are marked *