ಮಂಗಳೂರು: ದೇಶಾದ್ಯಂತ 75ನೇ ಸ್ವಾತಂತ್ರ್ಯೋತ್ಸವ ಕಳೆಕಟ್ಟಿದ್ದರೂ, ನಗರದ ಹೃದಯ ಭಾಗ ಹಂಪನಕಟ್ಟೆಯ ಗಾಂಧಿ ಪಾರ್ಕಿನಲ್ಲಿರುವ ಗಾಂಧಿ ತಾತ ಮಾತ್ರ ಅನಾಥರಾಗಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಪಾರ್ಕ್ ಆವರಣದಲ್ಲಿ ಕಾಮಗಾರಿ ನಡೆಯುತ್ತಿದ್ದು, ಇದರಿಂದಾಗಿ ಪಾರ್ಕ್ ಸ್ಥಿತಿ ಗಬ್ಬೆದ್ದು ಹೋಗಿದೆ.
ಸ್ವಾತಂತ್ರ್ಯ ಕಾಲದಲ್ಲಿ ಗಾಂಧೀಜಿ ಮಂಗಳೂರಿಗೆ ಬಂದಿದ್ದ ನೆನಪಿನಲ್ಲಿ ಪಾರ್ಕ್ ಮಧ್ಯೆ ಗಾಂಧಿಯ ಪ್ರತಿಮೆ ಸ್ಥಾಪಿಸಲಾಗಿತ್ತು. ಸುಂದರ ಪಾರ್ಕ್ ಆಗಿದ್ದಲ್ಲದೆ, ಸತ್ಯಾಗ್ರಹ ಹೆಸರಿನ ಪ್ರತಿಭಟನೆ, ಉಪವಾಸಗಳು ಇದೇ ಜಾಗದಲ್ಲಿ ನಡೆಯುತ್ತಿದ್ದವು. ಇಂಥ ಹೆಗ್ಗಳಿಕೆ ಹೊಂದಿರುವ ಗಾಂಧಿ ಪಾರ್ಕ್ ನಲ್ಲಿ ವಿಶೇಷ ದಿನಗಳಂದು ಮಹಾನಗರ ಪಾಲಿಕೆಯಿಂದಲೇ ಗಾಂಧಿ ತಾತನಿಗೆ ಗೌರವ ಸಲ್ಲಿಸುವ ಸಂಪ್ರದಾಯ ಇದೆ.
ಆದರೆ, ಈ ಬಾರಿ ಅಲ್ಲಿನ ಪಾರ್ಕ್, ಸ್ಮಾರ್ಟ್ ಸಿಟಿ ಕಾಮಗಾರಿಯಿಂದಾಗಿ ಗಬ್ಬೆದ್ದು ಹೋಗಿದ್ದು, ಕಬ್ಬಿಣದ ರಾಡ್ ರಾಶಿ ಬಿದ್ದಿದ್ದರೆ, ಗಾಂಧಿ ಪ್ರತಿಮೆಯ ಬುಡದಲ್ಲಿ ಪ್ಲಾಸ್ಟಿಕ್ ಸರಂಜಾಮುಗಳು, ಕಬ್ಬಿಣ ಇನ್ನಿತರ ವೇಸ್ಟ್ ಸರಕುಗಳು, ಕಾರ್ಮಿಕರ ಬಟ್ಟೆಗಳನ್ನು ರಾಶಿ ಹಾಕಲಾಗಿದೆ. ಕನಿಷ್ಠ ಸ್ವಾತಂತ್ರ್ಯ ದಿನಕ್ಕಾದರೂ ಗಾಂಧಿ ಪ್ರತಿಮೆಯ ಆವರಣವನ್ನು ಶುಚಿಗೊಳಿಸಿಲ್ಲ. ಸ್ವಾತಂತ್ರ್ಯ, ಗಣರಾಜ್ಯ ಇನ್ನಿತರ ವಿಶೇಷ ದಿನಗಳ ಸಂದರ್ಭದಲ್ಲಿ ಗಾಂಧೀಜಿ, ಅಂಬೇಡ್ಕರ್ ಪ್ರತಿಮೆಗಳಿಗೆ ಹೂಹಾರ ಹಾಕುವುದು, ಪ್ರತಿಮೆಗಳನ್ನು ಶುಚಿಗೊಳಿಸುವುದನ್ನು ಮಾಡಲಾಗುತ್ತದೆ. ಆದರೆ, ಈ ಬಾರಿ ಮಾತ್ರ ಇಲ್ಲಿನ ಗಾಂಧಿ ತಾತನಿಗೆ ಸ್ವಾತಂತ್ರ್ಯವೇ ಸಿಗದಂತಾಗಿದೆ.
ಗಬ್ಬೆದ್ದು ನಾರುವ ಪರಿಸರದಲ್ಲಿ ಗಾಂಧಿಯ ಪ್ರತಿಮೆ ಅನಾಥವಾಗಿ ನಿಂತು ಬಿಟ್ಟಿದೆ. ಗಾಂಧಿ ತಾತನ ಅವಸ್ಥೆ ನೋಡಿದ ಕೆಲಸ ಮಾಡುವ ಕಾರ್ಮಿಕನೊಬ್ಬ ಗಾಂಧಿಯ ಕೊರಳಿಗೆ ಹೂವಿನ ಹಾರ ತಂದು ಹಾಕಿದ್ದಾನೆ. ಕೈಗೊಂದು ತ್ರಿವರ್ಣದ ಪ್ಲಾಸ್ಟಿಕ್ ಧ್ವಜವನ್ನೂ ಇರಿಸಿದ್ದಾನೆ. ಆದರೆ, ಮಹಾನಗರ ಪಾಲಿಕೆಯಾಗಲೀ, ಇತರ ಯಾವುದೇ ಸಂಘಟನೆಗಳ ಕಾರ್ಯಕರ್ತರಾಗಲೀ ಗಾಂಧಿಯ ದುಸ್ಥಿತಿಯನ್ನು ಗಮನಿಸಿಲ್ಲ. ಎಷ್ಟೋ ಬಾರಿ ಕಾಂಗ್ರೆಸ್ ಕಾರ್ಯಕರ್ತರು ಇದೇ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿದ್ದರು. ಆದರೆ, ಈ ಬಾರಿ ಸ್ವಾತಂತ್ರ್ಯೋತ್ಸವ ದಿನದಂದೇ ಗಾಂಧಿಯನ್ನು ಆಡಳಿತ ಮತ್ತು ವಿಪಕ್ಷದ ಜನಪ್ರತಿನಿಧಿಗಳೆಲ್ಲ ಸೇರಿ ಅನಾಥವಾಗಿಸಿರುವುದು ದುರಂತವೇ ಸರಿ.