Ad Widget .

ಅಲ್ಲಿ‌ ಕಾಮನ್ ಸೆನ್ಸ್ ತಪ್ಪಿದ್ದು ಯಾರು? ಡಿಸಿ, ಡಿಎಚ್ಒ ರನ್ನು ತರಾಟೆಗೆ ತೆಗೆದುಕೊಂಡ ಸಿಎಂ ಗೆ ಉಸ್ತುವಾರಿ ಸಚಿವರು ಕಂಡಿಲ್ಲವೇ?

ಮಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಬಸವರಾಜ ಬೊಮ್ಮಾಯಿಯವರು ಪ್ರಥಮ ‌ಬಾರಿಗೆ ಕರಾವಳಿ ಪ್ರವಾಸವನ್ನು ಗುರುವಾರ ಮಾಡಿದ್ದರು. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಮತ್ತು ಉಡುಪಿಯಲ್ಲಿ ದಿನೇದಿನೇ ಕೊರೊನಾ ಪ್ರಕರಣಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಭೇಟಿ ತುಂಬಾ ಪ್ರಾಮುಖ್ಯತೆ ಪಡೆದಿತ್ತು. ಅದರಂತೆ ಮುಖ್ಯಮಂತ್ರಿಗಳು ಕೂಡಾ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಜಿಲ್ಲೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಿದ್ದು ನಿಜಕ್ಕೂ ಸಾರ್ವಜನಿಕರಲ್ಲಿ ಒಂದು ರೀತಿಯ ಆಶಾಭಾವ ಮೂಡಿಸಿತ್ತು. ಆದರೆ ಸಿಎಂ ರ ಸಭೆಯಲ್ಲಿ ‌ನಡೆಸಿಕೊಟ್ಟ ಜಿಲ್ಲಾಡಳಿತದ ಅಧಿಕಾರಿಗಳಿಗೆ ‌ಮಾತ್ರ ‘ಕೋಲು ಕೊಟ್ಟು ಪೆಟ್ಟು ತಿಂದ ಪರಿಸ್ಥಿತಿ’ಯಾಗಿತ್ತು.

Ad Widget . Ad Widget .

ಮಂಗಳೂರಿಗೆ ಬಂದಿಳಿದ ಸಿಎಂ ಜಿಲ್ಲಾ ಆಸ್ಪತ್ರೆಯಲ್ಲಿ ಮಕ್ಕಳ ಕೋವಿಡ್ ವಾರ್ಡ್ ಉದ್ಘಾಟಿಸಿ, ಆಸ್ಪತ್ರೆಯಲ್ಲಿನ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು. ಬಳಿಕ ಜಿಲ್ಲಾ ಅಂಬೇಡ್ಕರ್ ಭವನ ಉದ್ಘಾಟಿಸಿದರು. ವಿವಿಧ ಕಾರ್ಯಕ್ರಮಗಳ ಬಳಿಕ ಜಿಲ್ಲಾ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

Ad Widget . Ad Widget .


ಸಭೆಯಲ್ಲಿ ಆರೋಗ್ಯ ಮಂತ್ರಿ ಡಾ| ಸುಧಾಕರ್, ಉಸ್ತುವಾರಿ ಸಚಿವ ಎಸ್.ಅಂಗಾರ, ಜಿಲ್ಲೆಯ ಶಾಸಕರು, ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಜಿಲ್ಲೆಯ ಹಿರಿಯ, ಕಿರಿಯ ಎಲ್ಲಾ ಅಧಿಕಾರಿಗಳು ಹಾಜರಿದ್ದರು. ಆದರೆ ಸಿಎಂ ನ ಕೋಪಕ್ಕೆ ಬಲಿಯಾಗಿದ್ದು ಮಾತ್ರ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಚಂದ್ರ.

ಕೊರೊನಾ ಪ್ರಕರಣಗಳ ಕುರಿತಂತೆ ಸಿಎಂ ಪ್ರಗತಿ ಪರಿಶೀಲನೆ ನಡೆಸಿದ್ದು, ಈ ವೇಳೆ ಇವರಿಬ್ಬರನ್ನೂ ಸರಿಯಾಗಿಯೇ ಬೆಂಡೆತ್ತಿದರು. ‘ನೀವೇನ್ ಮಾಡ್ತಿದೀರಿ, ನಿಮಗೇನು ಕಾಮನ್ ಸೆನ್ಸ್ ಇಲ್ವಾ? ಮಾಸ್ಕ್, ಸ್ಯಾನಿಟೈಸರ್ ಇಲ್ಲದೇ ಅದ್ಹೇಗೆ ಕೊರೊನಾ ಕಂಟ್ರೋಲ್ ಮಾಡ್ತೀರಿ’ ಮುಂತಾದ ಹಲವು ಪ್ರಶ್ನೆಗಳ ಸುರಿಮಳೆಯನ್ನೇ ಸುರಿದಾಗ ಇಬ್ಬರೂ ಅಧಿಕಾರಿಗಳು ಥಂಡಾ ಹೊಡೆದರು. ಉತ್ತರ ಇದ್ದರೂ ಕೇಳಿಸಿಕೊಳ್ಳುವ ತಾಳ್ಮೆ ಮುಖ್ಯಮಂತ್ರಿಗಳಿಗೆ ಇರಲಿಲ್ಲ. ಹಾಗಂತ ಅಧಿಕಾರಿಗಳು ಮಾಡಿದ್ದೆಲ್ಲಾ ಸರಿ ಅನ್ನುವ ಹಾಗೆಯೂ ಇಲ್ಲ. ಮಾಸ್ಕ್, ಸ್ಯಾನಿಟೈಸರ್ ಖರೀದಿಗಾಗಿ ಮೀಸಲಿಟ್ಟ ಹಣ ಬಿಡುಗಡೆ ಮಾಡದೇ ತಪ್ಪು ‌ಮಾಡಿರುವುದು ನಿಜ. ಆದರೆ ಇದಕ್ಕೆಲ್ಲಾ ಈ ಅಧಿಕಾರಿಗಳಿಬ್ಬರು ಮಾತ್ರ ಕಾರಣವೇ? ಅಲ್ಲೇ ಸಿಎಂ ಪಕ್ಕದಲ್ಲಿ ಕುಳಿತಿದ್ದ ಉಸ್ತುವಾರಿ ಸಚಿವರೂ ಈ ಘಟನೆಗಳಿಗೆ ಜೊತೆಗಾರರಲ್ಲವೇ? ಹಾಗಾದರೆ ಕಾಮನ್ ಸೆನ್ಸ್ ತಪ್ಪಿದ್ದು ಯಾರು?

ಉಸ್ತುವಾರಿ ಸಚಿವ ಎಸ್. ಅಂಗಾರರು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಕುರಿತಾಗಿ ಅಧಿಕಾರಿಗಳ ಜೊತೆಗೆ ಪರಿಶೀಲನೆ ಮಾಡಬೇಕಿತ್ತು. ಆದರೆ ಅದ್ಯಾವುದನ್ನೂ ಮಾಡದೇ ಅಧಿಕಾರಿಗಳನ್ನು ಸಿಎಂ ಬೈಯುವಾಗ ಮನಸ್ಸೊಳಗೇ ಮುಸಿ ಮುಸಿ ನಗುತ್ತಿದ್ದದ್ದು ಮುಖ್ಯಮಂತ್ರಿಗಳಿಗೆ ಕಾಣಲಿಲ್ಲ. ಹೇಳಿ ಕೇಳಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚು ಕಂಡುಬರಲು ಅಧಿಕಾರಿಗಳ ಶ್ರಮವೇ ಕಾರಣ. ಹೆಚ್ಚಿನ ಸಂಖ್ಯೆಯ ಟೆಸ್ಟ್ ಗಳನ್ನು ಮಾಡುವ ಕಾರಣದಿಂದ ಕೇಸ್ ಗಳು ಜಾಸ್ತಿಯಾಗಿ ಪತ್ತೆಯಾಗುತ್ತಿವೆ. ಇದು ನಿಜಕ್ಕೂ ಅಭಿನಂದನಾರ್ಹ.

ಎಲ್ಲದಕ್ಕೂ ಅವಕಾಶ ಕೊಟ್ಟು, ಅಂತರಾಜ್ಯ ಸಂಚಾರವನ್ನೂ ಬಂದ್ ಮಾಡದೇ ಕೊರೊನಾ ಹರಡಲು ಕಾರಣವಾದ ಜನಪ್ರತಿನಿಧಿಗಳ ಮಧ್ಯೆ ಪ್ರತಿದಿನ ಹೋರಾಟ ಮಾಡುತ್ತಿರುವ ಅಧಿಕಾರಿಗಳು ಬಲಿಯಾಗಬೇಕೇ? ಈ ಹಿಂದೆ ಉಸ್ತುವಾರಿ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿಯವರು, ಡಿಸಿ ಯವರ ಜೊತೆಗೆ ಚರ್ಚಿಸದೇ ಗಳಿಗೆಗೊಂದು ಹೇಳಿಕೆ ಕೊಟ್ಟು ಜನರನ್ನು ಗಲಿಬಿಲಿ ಉಂಟುಮಾಡುತ್ತಿದ್ದುದನ್ನು ಜನ ಮರೆತಿಲ್ಲ. ಸಭೆಯಲ್ಲಿ ಅಧಿಕಾರಿಗಳ‌ ಕಾಮನ್ ಸೆನ್ಸ್ ಪ್ರಶ್ನಿಸುವ ಮುಖ್ಯಮಂತ್ರಿಗಳು ಈ ಕಾಮನ್ ಸೆನ್ಸ್ ಗಳನ್ನೂ ತಿಳಿದಿರಬೇಕಲ್ಲವೇ? ಉಸ್ತುವಾರಿ ಸಚಿವರಿಗೂ, ಜಿಲ್ಲೆಯ ಶಾಸಕರಿಗೂ ಕೊರೊನಾ ನಿರ್ವಹಣೆಯಲ್ಲಿ ಪಾತ್ರವಿದೆ ಅನ್ನುವುದನ್ನೂ ತಿಳಿದುಕೊಳ್ಳದೇ ಅಧಿಕಾರಿಗಳನ್ನು ಮಾತ್ರ ಬಲಿಪಶು ಮಾಡುವುದು ಸರಿಯೇ?…

ಈ ನಡುವೆ ನಿನ್ನೆ ನಡೆದ ಸಭೆ , ಸಮಾರಂಭಗಳಲ್ಲಿ ಕೊರೊನಾ ಮಾರ್ಗಸೂಚಿಗಳೆಷ್ಟು ಪಾಲನೆಯಾಗಿತ್ತು? ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ನೂರಕ್ಕೆ ನೂರು ಸರಿಯಾಗಿತ್ತೇ ಎನ್ನುವ ಪ್ರಶ್ನೆಯನ್ನೂ ಕೇಳಬೇಕಿದೆ.

Leave a Comment

Your email address will not be published. Required fields are marked *