ಕಲಬುರಗಿ: ಪೊಲೀಸ್ ಸಬ್ಇನ್ಸ್ಪೆಕ್ಟರ್ ಆಗಬೇಕು ಎನ್ನುವ ಚಲ ಹೊಂದಿರುವ ಮಹಿಳೆ, ತಾನು ಗರ್ಭಿಣಿ ಎನ್ನುವುದನ್ನು ಮರೆತು ಫಿಜಿಕಲ್ ಟೆಸ್ಟ್‌ನಲ್ಲಿ ಭಾಗವಹಿಸಿದ ಅಚ್ಚರಿ ಮೂಡಿಸಿದ್ದಾರೆ.
ಬೀದರ್ ಜಿಲ್ಲೆಯ ಅಶ್ವಿನಿ ಸಂತೋಶ (24) ಕೊರೆ ಎಂಬ ಮಹಿಳೆ ಇಂಜಿನಿಯರಿಂಗ್ ಪದವಿ ಪೂರೈಸಿದ ಬಳಿಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಬೇಕು ಅನ್ನೋ ಕನಸಿತ್ತು. ಇದೇ ಕಾರಣಕ್ಕೆ ಕಠಿಣ ಪರಿಶ್ರಮ ಹಾಕಿದ್ದು, ಈಗಾಗಲೇ ಎರಡು ಬಾರಿ ಫಿಜಿಕಲ್ ಟೆಸ್ಟ್‌ನಲ್ಲಿ ಪಾಸ್ ಆಗಿದ್ದಾರೆ. ಇವರು ಲಿಖಿತ ಪರೀಕ್ಷೆ (ರಿಟನ್ ಟೆಸ್ಟ್) ಮುಗಿಸಿಲ್ಲ. ಎರಡು ಬಾರಿ ಹಿನ್ನೆಡೆ ಅನುಭವಿಸಿದರೂ ಚಲ ಬಿಡದೆ, ಮೂರನೇ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಮೂರನೇ ಪ್ರಯತ್ನದ ವೇಳೆಗೆ ಅಶ್ವಿನಿ ಗರ್ಭಿಣಿಯಾಗಿದ್ದಾರೆ. ಹೀಗಾಗಿ ಫಿಜಿಕಲ್ ಟೆಸ್ಟ್‌ನಲ್ಲಿ ಪಾಲ್ಗೊಳ್ಳುವುದು ಬೇಡವೆಂದು ವೈದ್ಯರು ಸಲಹೆ ನೀಡಿದ್ದರಂತೆ. ಆದರೂ ಅಶ್ವಿನಿ ತನ್ನ ಜೀವ ಮಾತ್ರವಲ್ಲದೇ, ಕಂದನ ಜೀವ ಕೂಡಾ ಪಣಕ್ಕೆ ಇಟ್ಟು ಹೋರಾಡಿದ್ದಾರೆ.
ಎರಡು ದಿನದ ಹಿಂದೆ ಕಲಬುರಗಿಯ ಡಿಎಆರ್ ಮೈದಾನದಲ್ಲಿ ನಡೆದ ಪೊಲೀಸ್ ಸಬ್ಇನ್ಸ್ಪೆಕ್ಟರ್ ನೇಮಕಾತಿಯ ಫಿಜಿಕಲ್ ಟೆಸ್ಟ್‌ನಲ್ಲಿ 1.36 ನಿಮಿಷದಲ್ಲಿ 400 ಮೀಟರ್ ದೂರ ಓಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಈಶಾನ್ಯ ವಲಯ ಐಜಿಪಿ ಮನೀಶ್ ಕರ್ಬಿಕರ್, “ದೈಹಿಕ ಪರೀಕ್ಷೆಯಲ್ಲಿ ಗರ್ಭಿಣಿ ಇರುವುದು ನೇಮಕಾತಿ ಸಮಿತಿಯ ಗಮನಕ್ಕೆ ಬಂದಿಲ್ಲ. ಗರ್ಭಿಣಿಯರು ಪೊಲೀಸ್ ಫಿಜಿಕಲ್ ಟೆಸ್ಟ್‌ನಲ್ಲಿ ಪಾಲ್ಗೊಳ್ಳುವಂತಿಲ್ಲ. ಇದಕ್ಕೆ ಇಲಾಖೆ ಅನುಮತಿ ಕೂಡ ಕೊಡುವುದಿಲ್ಲ. ಹಾಗಾಗಿ ಮಹಿಳೆಯರು ತಮ್ಮ ಗರ್ಭಾವಸ್ಥೆಯನ್ನು ಮುಚ್ಚಿಡುತ್ತಾರೆ” ಎಂದು ತಿಳಿಸಿದ್ದಾರೆ.