ಮಂಗಳೂರು: ಸೌದಿ ಅರೇಬಿಯಾದಿಂದ ಮುಂಬೈಗೆ ಬಂದಿದ್ದ ಯುವಕನಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಇದ್ದರೂ ಅಲ್ಲಿನ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಸೇರಿ ಕ್ವಾರಂಟೈನ್ ಕೇಂದ್ರಕ್ಕೆ ತಳ್ಳಿದ್ದು, ಎರಡು ದಿನಗಳಿಂದ ಅನ್ನ ನೀರಿಲ್ಲದೆ ಪರದಾಡಿದ ಅಮಾನವೀಯ ಘಟನೆ ನಡೆದಿದೆ. ಎರಡು ಡೋಸೇಜ್ ಕೊರೊನಾ ಲಸಿಕೆ ನೀಡಿರುವ ಪ್ರಮಾಣಪತ್ರ, ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಇದ್ದರೂ, ಕ್ವಾರಂಟೈನ್ ಆಗಲೇಬೇಕೆಂದು ಹೊಟೇಲ್ ಕೊಠಡಿಯಲ್ಲಿ ಯುವಕನನ್ನು ಕೂಡಿಹಾಕಲಾಗಿತ್ತು. ಇದರಿಂದಾಗಿ ಎರಡು ದಿನಗಳಿಂದ ಅನ್ನ, ನೀರಿಲ್ಲದೆ ಬವಣೆ ಪಟ್ಟಿದ್ದ ಯುವಕ ಕೊನೆಗೂ ಅಲ್ಲಿಂದ ಮಂಗಳೂರು ಮೂಲದ ಸಾಮಾಜಿಕ ಕಾರ್ಯಕರ್ತರ ನೆರವಿನಿಂದ ಪಾರಾಗಿ ಬಂದಿದ್ದಾನೆ.
ತೊಕ್ಕೊಟ್ಟು ಮೂಲದ ನಿವಾಸಿ ಮೊಹಮ್ಮದ್ ಸೌಬಾನ್ ನಾಲ್ಕು ದಿನಗಳ ಹಿಂದೆ ಈತ ಸೌದಿ ಅರೇಬಿಯಾದಿಂದ ನೇರ ಮಂಗಳೂರಿಗೆ ಬರಲು ಸಾಧ್ಯವಾಗದೆ ವಿಮಾನದಲ್ಲಿ ಮುಂಬೈಗೆ ಬಂದು ಇಳಿದಿದ್ದ. ಅಲ್ಲಿ ಹೊರಬರುತ್ತಿದ್ದಂತೆ ತನ್ನಲ್ಲಿ ಕೋವಿಡ್ ನೆಗೆಟಿವ್ ಇರುವುದನ್ನು ತೋರಿಸಿದರೂ, ಮುಂಬೈ ಮಹಾನಗರ ಪಾಲಿಕೆಯ ಅಧಿಕಾರಿಗಳು ಆತನನ್ನು ಕರೆದೊಯ್ದು ಕ್ವಾರಂಟೈನ್ ಕೇಂದ್ರಕ್ಕೆ ಹಾಕಿದ್ದರು.
ಮುಂಬೈ ನಗರದ ಬಗ್ಗೆ ಪರಿಚಯವೇ ಇಲ್ಲದ ಸೌಬಾನ್ ಇದರಿಂದ ಭಯಗೊಂಡು ದಿಕ್ಕೆಟ್ಟು ಹೋಗಿದ್ದ. ಎಲ್ಲೋ ಒಂದು ಹೊಟೇಲಿನಲ್ಲಿ ಕೂಡಿಹಾಕಲಾಗಿತ್ತು. ತನ್ನಲ್ಲಿ ಎಲ್ಲವುಗಳ ಸರ್ಟಿಫಿಕೇಟ್ ಇದ್ದರೂ, ಅಧಿಕಾರಿಗಳು ಯಾರೂ ಈತನ ಮಾತು ಕೇಳಲಿಲ್ಲ. ಹೊಟೇಲಿನಲ್ಲಿ ಊಟ, ತಿಂಡಿಯನ್ನೂ ಕೊಡುತ್ತಿರಲಿಲ್ಲ. ಈ ಬಗ್ಗೆ ಊರಿನ ಯಾರಿಗಾದ್ರೂ ಹೇಳಬಹುದು ಅಂದ್ರೆ, ಆತನಲ್ಲಿ ಭಾರತೀಯ ಸಿಮ್ ಕೂಡ ಇರಲಿಲ್ಲ. ಕೊನೆಗೆ, ಫೇಸ್ಬುಕ್ ಫ್ರೆಂಡ್ ಆಗಿದ್ದ ಮಂಗಳೂರು ಮೂಲದ ಸೂರಜ್ ಎಂಬವರಿಗೆ ತನಗಾದ ಕಷ್ಟವನ್ನು ಮೆಸೆಂಜರ್ ಮೂಲಕ ತಿಳಿಸಿದ್ದಾರೆ. ಸೂರಜ್, ಈ ಬಗ್ಗೆ ತನ್ನ ಗೆಳೆಯ ಎರಾಲ್ ಗೆ ತಿಳಿಸಿದ್ದು, ಅವರು ಕೂಡಲೇ ಮುಂಬೈನಲ್ಲಿ ಪತ್ರಕರ್ತರಾಗಿರುವ ಕನ್ನಡಿಗ ರೋನ್ಸ್ ಬಂಟ್ವಾಳ್ ಗಮನಕ್ಕೆ ತಂದಿದ್ದಾರೆ.

ಯುವಕನಿಗಾದ ಕಷ್ಟವನ್ನು ವಿವರಿಸಿದ ಕೂಡಲೇ ಸ್ಪಂದಿಸಿದ ರೋನ್ಸ್ ಬಂಟ್ವಾಳ್, ಹೊಟೇಲ್ ಇದ್ದ ಜಾಗವನ್ನು ಪತ್ತೆ ಮಾಡಿ ಅಲ್ಲಿಗೆ ತೆರಳಿದ್ದಾರೆ. ಆನಂತರ ಯುವಕನಿಗೆ ಊಟ, ತಿಂಡಿ ಕೊಟ್ಟು ಉಪಚರಿಸಿದ್ದಾರೆ. ಕ್ವಾರಂಟೈನ್ ಕೇಂದ್ರದಿಂದ ಅಧಿಕಾರಿಗಳು ಬಿಡಲು ಒಪ್ಪದ ಕಾರಣ ರೋನ್ಸ್ ಬಂಟ್ವಾಳ್, ಅಂಧೇರಿ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷರಾಗಿರುವ ಉಡುಪಿ ಜಿಲ್ಲೆಯ ಬಾರ್ಕೂರು ಮೂಲದ ಕ್ಲೈವ್ ಡಾಯಸ್ ಗಮನಕ್ಕೆ ತಂದಿದ್ದಾರೆ. ಅಲ್ಲದೆ, ಸಮಾಜ ಸೇವಕ ತೋನ್ಸೆ ಸಂಜೀವ ಪೂಜಾರಿ ಗಮನಕ್ಕೆ ತಂದು ಯುವಕನನ್ನು ಪಾರು ಮಾಡಲು ಯತ್ನ ಮಾಡಿದ್ದಾರೆ.
ಕ್ಲೈವ್ ಡಾಯಸ್ ಬಳಿಕ ಮಹಾನಗರ ಪಾಲಿಕೆಯ ಅಧಿಕಾರಿಗಳೊಂದಿಗೆ ಮಾತನಾಡಿ, ಯುವಕನನ್ನು ಕ್ವಾರಂಟೈನ್ ಕೇಂದ್ರದಿಂದ ಬಿಡಿಸಿದ್ದಾರೆ. ಅಲ್ಲದೆ, ರೋನ್ಸ್ ಬಂಟ್ವಾಳ್, ಸಂಜೀವ ಪೂಜಾರಿ, ಅನಿಲ್ ಅಲ್ಮೇಡಾ ಬ್ರಹ್ಮಾವರ, ಕೆನರಾ ಪಿಂಟೋ ಮಾಲೀಕ ಸುನಿಲ್ ಪಾಯ್ಸ್, ವ್ಯವಸ್ಥಾಪಕ ಮಧುಕರ್ ಸುವರ್ಣ ಇವರೆಲ್ಲ ಸೇರಿ ಯುವಕನಿಗೆ ಒಂದು ದಿನ ಆಶ್ರಯ ಕೊಟ್ಟು ಮಂಗಳೂರಿಗೆ ಬರುವ ಬಸ್ಸಿನಲ್ಲಿ ಕಳಿಸಿಕೊಟ್ಟಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೋನ್ಸ್ ಬಂಟ್ವಾಳ್, ಕ್ವಾರಂಟೈನ್ ಕೇಂದ್ರದಲ್ಲಿಟ್ಟು ಅಮಾಯಕರನ್ನು ಶಿಕ್ಷಿಸುವ ಕೆಲಸವೂ ನಡೆಯುತ್ತಿದೆ. ಮುಂಬೈನಲ್ಲಿ ಈ ರೀತಿಯ ದಂಧೆ ಕಡಿವಾಣ ಇಲ್ಲದಾಗಿದೆ. 14 ದಿನಗಳ ಕ್ವಾರಂಟೈನ್ ಕೇಂದ್ರದಲ್ಲಿಟ್ಟರೆ, ಅದಕ್ಕಾಗಿ ಸರಕಾರದಿಂದ ಕೆಲವು ಸಾವಿರ ರೂಪಾಯಿ ಹಣ ಬರುತ್ತದೆ. ಅದಕ್ಕಾಗಿ ಅಗತ್ಯ ಇಲ್ಲದಿದ್ದರೂ, ಕೆಲವರನ್ನು ಕ್ವಾರಂಟೈನ್ ಕೇಂದ್ರಕ್ಕೆ ತಳ್ಳುತ್ತಾರೆ ಎಂದು ಹೇಳಿದರು.