ಕಾಸರಗೋಡು: ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಮತ್ತು ಶರತ್ ಲಾಲ್ ಕೊಲೆ ಪ್ರಕರಣದ ಎಂಟನೇ ಆರೋಪಿ ಜೊತೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದ ಬೈಕ್ ಪೊಲೀಸ್ ಠಾಣೆಯಿಂದ ನಾಪತ್ತೆಯಾಗಿದೆ. ಎಂಟನೇ ಆರೋಪಿ ಪನಯಾಲ್‌ನ ಸುಬೀಶ್ (29) ಕೃತ್ಯ ನಡಿಸಿದ ದಿನ ಸಂಚರಿಸಿದ್ದ ಬೈಕ್ ಬೇಕಲ ಪೊಲೀಸ್ ಠಾಣೆಯಿಂದ ಕಾಣೆಯಾಗಿರುವುದು ಬೆಳಕಿಗೆ ಬಂದಿದ್ದು ತನಿಖೆಯ ಹಾದಿ ತಪ್ಪಿಸಲು ಈ ಕೃತ್ಯ ನಡೆಸಿರುವುದಾಗಿ ಆರೋಪ ಕೇಳಿ ಬರುತ್ತಿದೆ.
ಸಿಬಿಐ ಈಗ ತನಿಖೆ ನಡೆಸುತ್ತಿದ್ದು, ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾರಕಾಸ್ತ್ರ, ವಾಹನ ಮೊದಲಾದವುಗಳ ಬೆರಳಚ್ಚು ತಪಾಸಣೆಯನ್ನು ಸಿಬಿಐ ನಡೆಸುತ್ತಿದ್ದಂತೆ ಇದೀಗ ಪೊಲೀಸ್ ಠಾಣೆಯಿಂದ ಬೈಕ್ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಸಿಐಟಿಯು ಕಾರ್ಯಕರ್ತನಾಗಿದ್ದ ಸುಬೀಶ್ ಕೊಲೆ ಬಳಿಕ ಗಲ್ಫ್‌ಗೆ ಪಲಾಯನ ಗೈದಿದ್ದನು. ಬಳಿಕ ಪೊಲೀಸರು ಇಂಟರ್ ಫೋಲ್‌ನ ನೆರವಿನಿಂದ ಅಲ್ಲಿ ವಶಕ್ಕೆ ತೆಗೆದುಕೊಂಡು ಊರಿಗೆ ಕಳುಹಿಸಲಾಗಿದ್ದು, 2019ರ ಮೇ 16ರಂದು ಮಂಗಳೂರು ವಿಮಾನ ನಿಲ್ದಾಣದಿಂದ ಕ್ರೈಂ ಬ್ರಾಂಚ್ ಪೊಲೀಸರು ಈತನನ್ನು ಬಂಧಿಸಿದ್ದರು . ಬಳಿಕ ವಶಕ್ಕೆ ತೆಗೆದುಕೊಂಡಿದ್ದ ಬೈಕ್ ಅನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಬೇಕಲ ಪೊಲೀಸ್ ಠಾಣೆಗೆ ಒಪ್ಪಿಸಲಾಗಿತ್ತು. ಸಿಬಿಐ ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದ 12 ವಾಹನಗಳನ್ನು, ಮಾರಕಾಸ್ತ್ರ ಹಾಗೂ ಇತರ ಸಾಕ್ಷ್ಯಧಾರಗಳನ್ನು ವಶಕ್ಕೆ ಪಡೆಯಲು ಬಂದಾಗ ಒಂದು ಬೈಕ್ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಆದರೆ, ನಾಪತ್ತೆಯಾಗಿರುವ ಬೈಕ್‌ನ ಪತ್ತೆಗಾಗಿ ತನಿಖಾ ತಂಡ ಶೋಧ ಆರಂಭಿಸಿದೆ.
ಸಿಪಿಎಂ ಸ್ಥಳೀಯ ಮುಖಂಡ ಪೀತಾಂಬರನ್ ಸೇರಿದಂತೆ 12 ಆರೋಪಿಗಳನ್ನು ಬಂಧಿಸಲಾಗಿತ್ತು.
2019ರ ಫೆಬ್ರವರಿ 17 ರಂದು ರಾತ್ರಿ ಪೆರಿಯ ಕಲ್ಯೊಟ್‌ನಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಕೃಪೇಶ್ ಮತ್ತು ಶರತ್ ಲಾಲ್ ಅವರನ್ನು ಜೀಪ್‌ನಲ್ಲಿ ಬಂದು ಬೈಕ್‌ಗೆ ಢಿಕ್ಕಿ ಹೊಡೆಸಿ ಬಳಿಕ ಕೊಚ್ಚಿ ಕೊಲೆಗೈಯ್ಯಲಾಗಿತ್ತು. ಸುಪ್ರೀಂ ಕೋರ್ಟ್‌ನ ಆದೇಶದಂತೆ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು.