ಬೆಂಗಳೂರು: ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ವೇಳೆ ಸಂಭವಿಸಿದ ಘಟನೆ ಸಂಬಂಧ ಇದೀಗ ಐವರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲು ಮಾಡಲಾಗಿದೆ.
ನಿರ್ದೇಶಕ ಶಂಕರ್ ರಾಜ್, ಫೈಟ್ ಮಾಸ್ಟರ್ ವಿನೋದ್ ಹಾಗೂ ಜೆಸಿಬಿ ಡ್ರೈವರ್ ಸೇರಿ ಐವರ ಮೇಲೆ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಸ್ಯಾಂಡಲ್‍ವುಡ್‍ನಲ್ಲಿ ಮತ್ತೊಂದು ದೊಡ್ಡ ಅವಘಡ ಸಂಭವಿಸಿದೆ. 2016ರಲ್ಲಿ ‘ಮಾಸ್ತಿ ಗುಡಿ’ ಸಿನಿಮಾದ ವೇಳೆ ಫೈಟರ್ ಅನಿಲ್, ಉದಯ್ ಸಾವನ್ನಪ್ಪಿದ್ದರು. ಇದೀಗ ಅಂತದ್ದೇ ಇನ್ನೊಂದು ದುರ್ಘಟನೆ ಸಂಭವಿಸಿದೆ.
‘ಲವ್ ಯೂ ರಚ್ಚು’ ಶೂಟಿಂಗ್ ವೇಳೆ ಫೈಟರ್ ವಿವೇಕ್ ಹೈ ಟೆನ್ಷನ್ ವೈಯರ್ ತಗುಲಿ ಮೃತಪಟ್ಟಿದ್ದರು. ಈ ಸಂಬಂಧ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿರುವ ಪೊಲೀಸರು ಇದೀಗ ಐವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ ಸಂಬಂಧಿಸಿದಂತೆ ಸಾಹಸ ನಿರ್ದೇಶಕ ವಿನೋದ್, ಸಹ ನಿರ್ದೇಶಕ ಶಂಕರ್‍ರಾಜ್, ಜಮೀನು ಮಾಲೀಕ ಪುಟ್ಟರಾಜು, ಕ್ರೇನ್ ಚಾಲಕ ಮುನಿಯಪ್ಪ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನಿರ್ಮಾಪಕ ಗುರುದೇಶಪಾಂಡೆಗಾಗಿ ಶೋಧ ಮುಂದುವರಿದಿದೆ. ಈ ಮಧ್ಯೆ ಚಿತ್ರೀಕರಣ ನಡೆಸಲು ಪೊಲೀಸರ ಅನುಮತಿ ಪಡೆದಿರಲಿಲ್ಲ ಅಂತ ರಾಮನಗರ ಎಸ್‍ಪಿ ಗಿರೀಶ್ ಹೇಳಿದ್ದಾರೆ.
ಅವಘಡದಲ್ಲಿ ಇನ್ನೊಬ್ಬ ಫೈಟರ್ ರಂಜಿತ್ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಶೂಟಿಂಗ್ ವೇಳೆ ಫೈಟರ್ ವಿವೇಕ್ ಧರಿಸಿದ್ದ ಲೋಹದ ಹಗ್ಗ, ಹೈಟೆನ್ಶನ್ ವೈರ್ ತಗುಲಿ ಈ ದುರಂತ ಸಂಭವಿಸಿದೆ. ಗುರು ದೇಶಪಾಂಡೆ ನಿರ್ಮಾಣದ ಈ ಸಿನಿಮಾಗೆ ಫೈಟ್ ಮಾಸ್ಟರ್ ವಿನೋದ್ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದರು. ರಾಜರಾಜೇಶ್ವರಿ ಆಸ್ಪತ್ರೆ ಬಳಿ ಮೃತ ವಿವೇಕ್ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.