ತುಳುನಾಡು ಹಲವಾರು ಸಂಸ್ಕ್ರತಿ ಸಂಪ್ರದಾಯಗಳ ತವರೂರು. ಪರಶುರಾಮ ಸೃಷ್ಟಿಯ ಈ ನಾಡಲ್ಲಿ ಅಣು ಅಣುವಿನಲ್ಲೂ ದೇವರನ್ನು ಕಾಣುವ, ಪ್ರಕೃತಿಯನ್ನು ಆರಾಧಿಸುವ ಪದ್ದತಿ ಇಂದಿಗೂ ಜನಜನಿತ. ಅಂತಹ ಆಚರಣೆಗಳಲ್ಲಿ ‘ಆಟಿ ಅಮಾವಾಸ್ಯೆ’ ಬಹುಮುಖ್ಯವಾದದ್ದು.
ಸೌರಪಂಚಾಂಗದ ಪ್ರಕಾರ ಆಷಾಡ (ಆಟಿ)ಮಾಸದಲ್ಲಿ ಆಟಿ ಅಮವಾಸ್ಯೆ ತುಳುವರ ಪ್ರಮುಖ ಆಚರಣೆಗಳ ಒಂದು. ತುಳುವರು ಪ್ರಕೃತಿ ಆರಾಧಕರು. ರೋಗರುಜಿನಗಳು ಹೆಚ್ಚಾಗುವ ಈ ಮಳೆಗಾಲದಲ್ಲಿ ಔಷಧಕ್ಕಾಗಿ ಪ್ರಕೃತಿಯನ್ನೇ ನೆಚ್ಚಕೊಂಡವರು ತುಳುವರು. ಅಂತೆಯೇ ಈ ಅಮಾವಾಸ್ಯೆ ದಿನ ಔಷಧೀಯ ಗುಣಗಳಿರುವ ಹಾಲೆ ಮರದ ಕೆತ್ತೆಯ ಕಷಾಯವನ್ನು ಸೇವಿಸುವುದು ಇವರ ಪದ್ಧತಿ.
ಪಾಲೆ ಮರದ ಕಷಾಯ ಕುಡಿದು ಆಟಿ ಅಮಾವಾಸ್ಯೆ …

ಹಾಲೆ ಮರವನ್ನು ಹಿಂದಿನ ದಿನವೇ ಗುರುತಿಸಿ, ಅದಕ್ಕೆ ನೂಲು ಕಟ್ಟಿ, ನಾಳೆ ನಿನ್ನಿಂದ ಮದ್ದು ಸ್ವೀಕರಿಸಲು ಬರುವೆನು, ನಿನ್ನಲ್ಲಿರುವ ಎಲ್ಲಾ ಔಷಧೀಯ ಗುಣಗಳನ್ನು ಧಾರೆಯೆರೆದು ನೀಡು ಎಂದು ಪ್ರಾರ್ಥಿಸಿ ಮನೆಯ ಹಿರಿಯರು ಬರುತ್ತಾರೆ. ಆಟಿ ಅಮವಾಸ್ಯೆಯ ದಿನ ಮುಂಜಾನೆ ಬೆಳಗ್ಗೆ ಬೇಗನೇ ಎದ್ದು, ಸೂರ್ಯ ಮೂಡುವ ಮುಂಚೆ ಆ ಮರದ ಕೆತ್ತೆಯನ್ನು ಸಂಗ್ರಹಿಸಿ ತಂದು ಅದನು ಜಜ್ಜಿ ಕಷಾಯ ತಯಾರಿಸಿ ಕುಡಿಯುತ್ತಾರೆ.
ಆಷಾಢ ಅಮಾವಾಸ್ಯೆಯನ್ನು ಆಟಿ ಅಮಾವಾಸ್ಯೆಯೆಂದು ಕರೆಯಲಾಗುವ ಈ ದಿನದಲ್ಲಿ ಕರಾವಳಿಗರು ಆಷಾಢ ಅಮಾವಾಸ್ಯೆಗೆ ನೀಡುವಷ್ಟೇ ಮಹತ್ವವನ್ನು ಆ ದಿನ ಸೇವಿಸುವ ಹಾಲೆ ಮರದ ಕಷಾಯಕ್ಕೂ ನೀಡುತ್ತಾರೆ.

ಈ ಕಷಾಯವನ್ನು ಸೇವಿಸುವುದರಿಂದ ಆರೋಗ್ಯ ಸಮಸ್ಯೆಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ. ವೈಜ್ಞಾನಿಕವಾಗಿ ಈ ಮರದಿಂದ ತೆಗೆಯುವ ಹಾಲಿನಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವಿದೆ.
ಸೂರ್ಯೋದಯಕ್ಕೆ ಮೊದಲೇ ಪಾಲೆ (ಹಾಲೆ) ಮರದ ಸನಿಹ ಹೋಗಿ ಬಿಳಿ ಕಲ್ಲಿನಿಂದ ಜಜ್ಜಿ ಆ ಮರದ ತೊಗಟೆಯನ್ನು ತೆಗೆದು ಬರಬೇಕು. ತೊಗಟೆಯನ್ನು ತೆಗೆಯುವಾಗ ಕಬ್ಬಿಣದ ಕತ್ತಿಯನ್ನು ತಾಗಿಸಬಾರದು ಎನ್ನಲಾಗುತ್ತದೆ. ಅಂದು ಮನೆ ಮಂದಿಯೆಲ್ಲರೂ ಆರೋಗ್ಯ ವರ್ಧಕವಾದ ಪಾಲೆಯ ಅತಿ ಕಹಿಯಾದ ರಸವನ್ನು ಕುಡಿಯುತ್ತಾರೆ. ಅದರ ರಸವನ್ನು ಕರಿಮೆಣಸು, ಜೀರಿಗೆ, ಓಮ, ಬೆಳ್ಳುಳ್ಳಿ ಜೊತೆ ಅರೆದು ಮಿಶ್ರಣ ಮಾಡಿ, ಬೆಣಚು ಕಲ್ಲನ್ನು ಬಿಸಿ ಮಾಡಿ ಮಿಶ್ರಣಕ್ಕೆ ಮುಳುಗಿಸುತ್ತಾರೆ. ನಂತರ ಸಾಸಿವೆ ಒಗ್ಗರಣೆ ಕೊಟ್ಟು ಖಾಲಿ ಹೊಟ್ಟೆಯಲ್ಲಿ ಮಕ್ಕಳಿಂದ ಹಿಡಿದು ಮುದುಕರವರೆಗೂ ಕಷಾಯವನ್ನು ಕುಡಿಯುತ್ತಾರೆ. ಬಾಯಿಯ ಕಹಿಗೆ ಬೆಲ್ಲ, ಉಷ್ಣಕ್ಕೆ ಮೆತ್ತೆಗಂಜಿ ಸೇವಿಸುತ್ತಾರೆ.
ವೈಜ್ಞಾನಿಕವಾಗಿ ಈ ಆಚರಣೆಯನ್ನು ಗಮನಿಸಿದರೆ, ಪಾಲೆ ತೊಗಟೆಯ ರಸ ಒಂದು ವರ್ಷದ ಕಾಲ ಯಾವುದೇ ರೋಗ ರುಜಿನಗಳು ದೂರವಾಗುತ್ತದೆ ಎನ್ನುವಂತಹ ನಂಬಿಕೆ ಇದೆ. ಅನ್ಯ ಆಹಾರ ಸೇವನೆಗೆ ಮೊದಲು ಖಾಲಿ ಹೊಟ್ಟೆಗೆ ಸೇವಿಸುವುದು ಅತೀ ಉತ್ತಮವೆಂದು ತಿಳಿವಳಿಕೆ ಇದೆ. ಈ ರೀತಿ ಸೇವಿಸುವುದರಿಂದ ಅನೇಕ ಬಗೆಯ ಔಷಧಿಗಳು ನಮ್ಮ ಶರೀರಕ್ಕೆ ಸೇರಿತು ಎಂಬ ಬಲವಾದ ನಂಬಿಕೆ ಇದೆ.
ಹಿಂದಿನ ಕಾಲದಲ್ಲಿ ಆಟಿ ತಿಂಗಳಿನಲ್ಲಿ ವಿಪರೀತ ಮಳೆ. ಮಳೆಗಾಲದ ಈ ತಿಂಗಳು ಒಂದು ಹೊತ್ತಿನ ಊಟಕ್ಕೂ ಕಷ್ಟವಿತ್ತಂತೆ. ಮಳೆಯಿಂದಾಗಿ ಶರೀರದಲ್ಲಿ ಕಫ ವೃದ್ಧಿಸಿ ಅಗ್ನಿ ಕುಂಠಿತವಾಗುತ್ತದೆ. ಅಪೌಷ್ಟಿಕತೆಯಿಂದ ರೋಗಗಳೂ ಹೆಚ್ಚು. ಆದ್ದರಿಂದ ಈ ಮಾಸದಲ್ಲಿ ಆಟಿ ಕಳಂಜ ದೈವವು ಅಮಾವಾಸ್ಯೆಯಂದು ಅನೇಕ ಬಗೆಯ ಔಷಧೀಯ ಗುಣಗಳನ್ನು ತಂದು ಮರದಲ್ಲಿರಿಸುತ್ತದೆ. ಯಾರು ತೊಗಟೆಯ ರಸವನ್ನು ನಂಬಿಕೆಯಿಂದ ಸೇವಿಸುತ್ತಾರೆಯೋ ಅವರು ವರ್ಷಪೂರ್ತಿ ಆರೋಗ್ಯವಾಗಿರುತ್ತಾರೆ ಎಂಬ ನಂಬಿಕೆಯೂ ಬಲವಾಗಿದೆ
ಆಟಿ ಅಮಾವಾಸ್ಯೆಯಲ್ಲಿ ಬೇಟೆ: ಕಷಾಯ ಕುಡಿದ ತುಳುವರ ದಿನಚರಿ ಅಲ್ಲಿಗೇ ನಿಲ್ಲುವಿದಿಲ್ಲ. ಈ ದಿನ ಬೇಟೆ ಮಾಡಬೇಕು ಎಂಬ ನಂಬಿಕೆ ಇದೆ. ಇದರ ಉದ್ದೇಶವೇನೆಂದರೆ ಹಿಂದಿನ ಕಾಲದಲ್ಲಿ ಕಾಡುಪ್ರಾಣಿಗಳ ಹಾವಳಿ ಜಾಸ್ತಿಯಾಗಿದ್ದು, ಬೆಳೆಯನ್ನು ಹಾಳು ಮಾಡುತ್ತಿದ್ದವು. ಆಟಿ ತಿಂಗಳಿನಲ್ಲಿ ಸಾಮಾನ್ಯವಾಗಿ ಗದ್ದೆ ಕೆಲಸಗಳು ಮುಗಿದು ಜನಕ್ಕೆ ಕೆಲಸ ಇರುತ್ತಿರಲಿಲ್ಲ. ಹಾಗೆಯೇ ತಿನ್ನಲೂ ಆಹಾರ ಸಿಗುತ್ತಿರಲಿಲ್ಲ. ಈ ಕಾರಣದಿಂದ ಬೇಟೆ ಮಾಡಲು ಊರ ಮಂದಿ ಹೋಗುತ್ತಿದ್ದು, ಬೆಳೆ ರಕ್ಷಣೆ ಜೊತೆಗೆ ಹೊಟ್ಟೆಗೆ ಆಹಾರವೂ ದೊರಕಿದಂತಾಗುತ್ತಿತ್ತು. ಈವಾಗ ಈ ಗದ್ದೆ ಬೇಸಾಯಗಳೂ ಇಲ್ಲ, ಕಾಡುಪ್ರಾಣಿಗಳೂ ಅವನತಿ ಹೊಂದಿವೆ. ಈಗ ಅಮಾವಾಸ್ಯೆ ದಿನ ಹತ್ತಿರದ ಅಂಗಡಿಯಿಂದ ಕೋಳಿ, ಹಂದಿ ಮಾಂಸ ತಂದು ಗಮ್ಮತ್ತು ಮಾಡುವುದೇ ಅಮಾವಾಸ್ಯೆ ಸಂಭ್ರಮ!
ಅಲ್ಲದೆ ಈ ಅಮಾವಾಸ್ಯೆಯಲ್ಲಿ ದೇವಸ್ಥಾನಗಳಲ್ಲಿ ಪುಣ್ಯಸ್ನಾನ, ಸಮುದ್ರ ಸ್ನಾನವೂ ಪುಣ್ಯಪ್ರದವಾಗಿರುತ್ತದೆ. ಆಧುನಿಕ ಭರಾಟೆಯಲ್ಲಿಯೂ ಆಟಿ ಅಮಾವಾಸ್ಯೆ ಸಂಭ್ರಮ ಕರಾವಳಿಯಲ್ಲಿ ಮನೆಮಾಡಿರುವುದು ಸಂಸ್ಕೃತಿಯ ಹಿರಿಮೆ.