ಬೆಂಗಳೂರು: ರಾಜ್ಯದ ಅನೇಕ ಭಾಗಗಳಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಕರ್ನಾಟಕ ಸರಕಾರ ಮುಂದಾಗಿದೆ. ಬೆಂಗಳೂರು, ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸೋಂಕಿನ ತೀವ್ರತೆ ಮುಂದುವರಿದಿರುವುದರಿಂದ ರಾತ್ರಿ ಕರ್ಫ್ಯೂವನ್ನು ಮರಳಿ ಹೇರಿಕೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಣತರ ಜತೆ ಸಭೆ ನಡೆಸಲಾಗಿದ್ದು, ರಾಜ್ಯಾದ್ಯಂತ ರಾತ್ರಿ 9 ರಿಂದ ಬೆಳಿಗ್ಗೆ 5ರವರೆಗೆ ರಾತ್ರಿ ನಿಷೇಧಾಜ್ಞೆ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಹೇಳಿದರು. ನೈಟ್ ಕರ್ಫ್ಯೂ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದರು.
ಕೇರಳ ಮತ್ತು ಮಹಾರಾಷ್ಟ್ರ ಗಡಿ ಭಾಗಗಳಿಗೆ ಹೊಂದಿಕೊಂಡಂತೆ ಇರುವ ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ ಕೂಡ ಜಾರಿಗೆ ಬರಲಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಈ ಗಡಿ ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಅವರು ಹೇಳಿದರು.
ಸಚಿವರಾದ ಡಾ. ಸಿ ಎನ್ ಅಶ್ವಥ್ ನಾರಾಯಣ, ಡಾ. ಕೆ. ಸುಧಾಕರ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ತಜ್ಞ ವೈದ್ಯರಾದ ಡಾ.ಸಿ ಎನ್ ಮಂಜುನಾಥ, ಡಾ. ಸುದರ್ಶನ್, ಡಾ. ದೇವಿಪ್ರಸಾದ ಶೆಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ವೈದ್ಯರು ಸಭೆಯಲ್ಲಿ ನಡೆಸಿ ಅವರು ಈ ಮಾಹಿತಿ ನೀಡಿದರು.