ಟೋಕಿಯೋ: ಭಾರತದ ಮಹಿಳಾ ಬಾಕ್ಸರ್ ಲವ್ಲಿನಾ ಬೊರ್ಗೊಹೇನ್ ಅವರು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಮಹಿಳೆಯರ ವೆಲ್ಟರ್ ವೇಟ್ ವಿಭಾಗದಲ್ಲಿ ಲವ್ಲಿನಾ ಅವರು ಫೈನಲ್ ತಲುಪಲು ವಿಫಲರಾಗಿದ್ದಾರೆ. ಇಂದು ನಡೆದ ಸೆಮಿಫೈನಲ್ನಲ್ಲಿ ಟರ್ಕಿ ದೇಶದ ಬುಸೆನಾಜ್ ಸುರ್ಮೆನೆಲಿ ವಿರುದ್ಧ ಲವ್ಲಿನಾ ಮೂರೂ ಸುತ್ತುಗಳಲ್ಲಿ ಪರಾಭವಗೊಂಡು 5-0 ಅಂತರದಿಂದ ಸೋಲನುಭವಿಸಿದ್ದಾರೆ. ಈ ಮೂಲಕ ಚಿನ್ನ ಅಥವಾ ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸುವ ಅವಕಾಶದಿಂದ ವಂಚಿತರಾಗಿದ್ದಾರೆ.
ಆದರೆ, ಸೆಮಿಫೈನಲ್ ತಲುಪಿದ ಕಾರಣಕ್ಕೆ ಅವರಿಗೆ ಕಂಚಿನ ಪದಕ ಪ್ರಾಪ್ತಿಯಾಗಿದೆ. ಮೇರಿ ಕೋಮ್ ನಂತರ ಒಲಿಂಪಿಕ್ ಪದಕ ಗಳಿಸಿದ ಎರಡನೇ ಭಾರತೀಯ ಮಹಿಳೆ ಅವರೆನಿಸಿದ್ದಾರೆ. ಈ ಬಾರಿಯ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಭಾರತದ ಏಕೈಕ ಬಾಕ್ಸರ್ ಅವರೆನಿಸಿದ್ದಾರೆ.