Ad Widget .

ಅತ್ಯಾಚಾರ ಮಾಡಿದ್ದ ಪಾದ್ರಿಯನ್ನೇ ವರಿಸಲು ಹೊರಟಿದ್ದ ಸಂತ್ರಸ್ತ ಯುವತಿ| ಸುಪ್ರೀಂ ನಿರಾಕರಣೆ|

Ad Widget . Ad Widget .

ತಿರುವನಂತಪುರಂ: ಅತ್ಯಾಚಾರ ಮಾಡಿ ಮಗು ಕರುಣಿಸಿದ್ದ ಪಾದ್ರಿಯನ್ನೇ ಮದುವೆಯಾಗುವುದಾಗಿ ಸಂತ್ರಸ್ತ ಯುವತಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಬಗ್ಗೆ ಹೈಕೋರ್ಟಿನಲ್ಲೇ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದೆ. ಹೈಕೋರ್ಟ್ ಈಗಾಗ್ಲೇ ಆರೋಪಿ ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡಿದ್ದು, ಆ ತೀರ್ಪಿನ ಬಗ್ಗೆ ಮತ್ತೆ ಮೂಗು ತೂರಿಸಲು ಮುಂದಾಗಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

Ad Widget . Ad Widget .

ಕಣ್ಣೂರಿನ ಕೆಥೋಲಿಕ್ ಚರ್ಚ್ ನಲ್ಲಿ ಪಾದ್ರಿಯಾಗಿದ್ದ ರಾಬಿನ್ ವಡಕ್ಕುಂಚೇರಿ ಎಂಬಾತ 2017ರಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿದ್ದ. ಹುಡುಗಿ ಬಳಿಕ ಮಗುವನ್ನು ಹೆತ್ತಿದ್ದಲ್ಲದೆ, ಪ್ರಕರಣ ಚೈಲ್ಡ್ ಲೈನ್ ಮೂಲಕ ಪೋಕ್ಸೋ ಕಾಯ್ದೆಯಡಿ ದಾಖಲಾಗುವಂತೆ ಆಗಿತ್ತು. ಪೋಕ್ಸೋ ಪ್ರಕರಣವಾಗಿದ್ದರಿಂದ ಬಳಿಕ ತಲಶ್ಶೇರಿ ವಿಶೇಷ ಕೋರ್ಟ್ ಆರೋಪಿಗೆ 20 ವರ್ಷಗಳ ಶಿಕ್ಷೆ ವಿಧಿಸಿತ್ತು. ಆನಂತರ ಜೈಲು ಪಾಲಾಗಿದ್ದ ಪಾದ್ರಿ ರಾಬಿನ್ ವಡಕ್ಕುಂಚೇರಿ, ಕಳೆದ ವರ್ಷ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಸಂತ್ರಸ್ತ ಯುವತಿಯನ್ನು ಮದುವೆಯಾಗುವ ಪ್ರಸ್ತಾಪ ಇಟ್ಟಿದ್ದ. ಆದರೆ ಹೈಕೋರ್ಟ್ ಆರೋಪಿಯ ಅರ್ಜಿಯನ್ನು ವಜಾಗೊಳಿಸಿತ್ತು.
ಇದೀಗ ಸಂತ್ರಸ್ತ ಯುವತಿ ಮೂಲಕ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ್ದ ಅರ್ಜಿ ಬಗ್ಗೆ ಕುತೂಹಲ ಮನೆಮಾಡಿತ್ತು. ಆದರೆ, ಇಂದು ಬೆಳಗ್ಗೆ ವಿಚಾರಣೆಗೆ ಎತ್ತಿಕೊಂಡ ವಿನೀತ್ ಸರಣ್ ಮತ್ತು ದಿನೇಶ್ ಮಹೇಶ್ವರಿ ಅವರಿದ್ದ ಪೀಠ, ಸಂತ್ರಸ್ತ ಯುವತಿಯ ಅರ್ಜಿಯನ್ನು ಪುರಸ್ಕರಿಸಲು ನಿರಾಕರಿಸಿದೆ. ಸಂತ್ರಸ್ತ ಯುವತಿಗೆ ಸಾಮಾಜಿಕ ಮಾನ್ಯತೆ ಮತ್ತು ಹೆತ್ತ ಮಗುವು ಅತ್ಯಾಚಾರದಿಂದ ಹುಟ್ಟಿತ್ತು ಅನ್ನುವ ಆರೋಪದಿಂದ ಮುಕ್ತಗೊಳಿಸುವುದಕ್ಕಾಗಿ ಆತನನ್ನೇ ಮದುವೆಯಾಗಲು ಒಪ್ಪಿಗೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಳು. ಅಲ್ಲದೆ, ಮಗು ಈಗ ದೊಡ್ಡದಾಗಿದ್ದು, ಶಾಲೆಗೆ ಸೇರಿಸಬೇಕಿದ್ದರೆ ತಂದೆಯ ಹೆಸರನ್ನು ಉಲ್ಲೇಖ ಮಾಡಬೇಕಿದೆ. ಹೀಗಾಗಿ ಆರೋಪಿಗೆ ವಿನಾಯ್ತಿ ನೀಡಿ, ಮದುವೆಯಾಗಲು ಅವಕಾಶ ನೀಡಬೇಕೆಂದು ಕೋರಿದ್ದಳು.

ಆದರೆ, ಹೈಕೋರ್ಟ್ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದು ತೀರ್ಪಿನ ಬಗ್ಗೆ ಮತ್ತೆ ಪುನರ್ ವಿಮರ್ಶೆ ಮಾಡಲು ಹೋಗಲ್ಲ. ಅಗತ್ಯ ಇದ್ದರೆ ನೀವು ಹೈಕೋರ್ಟಿನ ವಿಭಾಗೀಯ ಪೀಠದಲ್ಲಿ ಈ ಕುರಿತು ಅರ್ಜಿ ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ. ಕಳೆದ ಬಾರಿ ಹೈಕೋರ್ಟ್ ನ್ಯಾಯಾಧೀಶ ಸುನಿಲ್ ಥೋಮಸ್, ಆರೋಪಿ ರಾಬಿನ್ ಸಲ್ಲಿಸಿದ್ದ ಅರ್ಜಿಯನ್ನು ನಿರಾಕರಣೆ ಮಾಡಿದ್ದರು.

ಈಗಾಗ್ಲೇ ತಲಶ್ಶೇರಿ ಪೋಕ್ಸೋ ವಿಶೇಷ ನ್ಯಾಯಾಲಯ ನೀಡಿರುವ 20 ವರ್ಷಗಳ ಸಜೆಯನ್ನು ಪ್ರಶ್ನಿಸಿ, ಹೈಕೋರ್ಟಿನಲ್ಲಿ ರಾಬಿನ್ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಬಾಕಿಯಿದೆ. ಈ ನಡುವೆಯೇ, ಸಂತ್ರಸ್ತ ಯುವತಿಯನ್ನು ಮದುವೆಯಾಗುವುದಾಗಿ ಹೇಳಿ ಕಳೆದ ಬಾರಿ ಹೈಕೋರ್ಟಿಗೆ ಮನವಿ ಮಾಡಿದ್ದ. ಆದರೆ, ಜಡ್ಜ್ ಸುನಿಲ್ ಥೋಮಸ್, ಈ ರೀತಿಯ ರೇಪ್ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಕೂಡ ಆರೋಪಿಗಳು ಮುಂದಿಟ್ಟ ಮದುವೆ ಪ್ರಸ್ತಾಪವನ್ನು ನಿರಾಕರಿಸಿದ್ದನ್ನು ಉಲ್ಲೇಖಿಸಿದ್ದರು.

Leave a Comment

Your email address will not be published. Required fields are marked *