ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ಅಧ್ಯಕ್ಷ ಸ್ಥಾನವನ್ನು ಭಾರತ ಭಾನುವಾರ ವಹಿಸಿಕೊಂಡಿದೆ. ಮುಂದಿನ ಒಂದು ತಿಂಗಳ ಕಾಲ ಭಾರತ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರೆಯಲಿದೆ. ಈ ಅವಧಿಯಲ್ಲಿ ಹಲವು ಮಹತ್ವದ ವಿಷಯಗಳನ್ನು ಚರ್ಚೆಗೆ ಎತ್ತಿಕೊಳ್ಳಲು ಭಾರತ ನಿರ್ಧರಿಸಿದೆ.
ಇನ್ನೊಂದು ವಿಶೇಷವೆಂದರೆ ಆ.9ರಂದು ಭದ್ರತಾ ಮಂಡಳಿಯ ಸಭೆ ಆಯೋಜನೆಯಾಗಿದ್ದು, ಸಭೆಯ ಅಧ್ಯಕ್ಷರಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಕಾರ್ಯನಿರ್ವಹಿಸಲಿದ್ದಾರೆ. ಈ ಮೂಲಕ ಭದ್ರತಾ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿಕೊಂಡ ದೇಶದ ಮೊದಲ ಪ್ರಧಾನಿ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. 1992ರಲ್ಲಿ ಅಂದಿನ ಪ್ರಧಾನಿ ನರಸಿಂಹರಾವ್ ಅವರು ಸದಸ್ಯ ರಾಷ್ಟ್ರದ ಪ್ರತಿನಿಧಿ ರೂಪದಲ್ಲಿ ಸಭೆಯಲ್ಲಿ ಭಾಗಿಯಾಗಿದ್ದು ಹೊರತುಪಡಿಸಿದರೆ, ಕಳೆದ 75 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಸಭೆಯ ಅಧ್ಯಕ್ಷತೆ ವಹಿಸುತ್ತಿರುವುದು ಇದೇ ಮೊದಲು.
ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 9ರಂದು ಭದ್ರತಾ ಮಂಡಳಿಯ ಶಾಂತಿಪಾಲನೆ, ಭಯೋತ್ಪಾದನೆ ಕುರಿತಾದ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿನ ಕಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಭಾರತದ ಅವಧಿ 2021ರ ಜ.1ರಂದು ಪ್ರಾರಂಭವಾಗಿದ್ದು, 2022ರ ಡಿ.31ಕ್ಕೆ ಅಂತ್ಯಗೊಳ್ಳಲಿದೆ. ಈ ಅವಧಿಯಲ್ಲಿ ತಲಾ 1 ತಿಂಗಳ ಮಟ್ಟಿಗೆ 2 ಬಾರಿ ಭಾರತಕ್ಕೆ ಅಧ್ಯಕ್ಷತೆ ವಹಿಸುವ ಯೋಗವಿದೆ. ಆಗಸ್ಟ್ ಅಧ್ಯಕ್ಷತೆಯು ಮೊದಲನೇ ಅವಧಿಯಾಗಿದ್ದು, ಇದೇ ಡಿಸೆಂಬರ್‌ನಲ್ಲಿ 2ನೇ ಬಾರಿ ಭಾರತ 1 ತಿಂಗಳ ಮಟ್ಟಿಗೆ ಅಧ್ಯಕ್ಷತೆ ವಹಿಸಿಕೊಳ್ಳಲಿದೆ.
ಈ ವೇಳೆ ಮೋದಿ ಜೊತೆಗೆ, ವಿದೇಶಾಂಗ ಸಚಿವ ಎಸ್.ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶ್ರಿಂಗ್ಲಾ ಅವರು ಕೂಡ ಉನ್ನತ ಮಟ್ಟದ ಸಭೆಗಳನ್ನು ನಡೆಸಲಿದ್ದಾರೆ.