ಮಂಗಳೂರು: ಕೊರೊನಾ ಪ್ರಕರಣ ಏರಿಕೆ ಹಿನ್ನಲೆ ಅಗಸ್ಟ್ 10 ವರೆಗೆ ಯಾವುದೇ ಸಭೆ ಸಮಾರಂಭ ನಡೆಸಬಾರದೆಂದು ಜಿಲ್ಲಾಧಿಕಾರಿ ಆದೇಶ ನೀಡಿದರೂ, ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಹಿಂದುಳಿದ ವರ್ಗಗಳ ಪದಗ್ರಹಣ ಭರ್ಜರಿ ಸಮಾರಂಭ ಏರ್ಪಡಿಸಲಾಗಿದೆ.
ಈಗಾಗಲೇ ಕೇರಳದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಲ್ಲಿದ್ದು ಗಡಿ ಜಿಲ್ಲೆಯಾದ ದಕ್ಷಿಣಕನ್ನಡದಲ್ಲಿ ಆತಂಕ ಎದುರಾಗಿದೆ. ಈ ಹಿನ್ನಲೆ ನಿನ್ನೆ ನಡೆದ ಜಿಲ್ಲಾಡಳಿತದ ಸಭೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಗಸ್ಟ್ 10 ರವರೆಗೆ ಯಾವುದೇ ಸಭೆ ಸಮಾರಂಭ, ರಾಜಕೀಯ ಸಭೆಗಳನ್ನು ನಡೆಸದಂತೆ ನಿರ್ಬಂಧ ಹೇರಲಾಗಿತ್ತು, ಆದರೆ ಜಿಲ್ಲಾಡಳಿತದ ಆದೇಶ ಬಂದು 24 ಗಂಟೆ ಕೂಡ ಕಳೆದಿಲ್ಲ, ಆಗಲೇ ಮಂಗಳೂರಿನಲ್ಲಿ ಕಾಂಗ್ರೇಸ್ ಭರ್ಜರಿ ರಾಜಕೀಯ ಸಮಾವೇಶ ನಡೆಸಿದೆ.
ರಾಜಕೀಯ ಸಮಾರಂಭಗಳಿಗೆ ನಿರ್ಬಂಧ ವಿಧಿಸಿದ್ದರೂ ಕ್ಯಾರೇ ಅನ್ನದೇ ಕಾರ್ಯಕ್ರಮ ನಡೆಸಲಾಗಿದ್ದು, ನೂರಾರು ಸಂಖ್ಯೆಯಲ್ಲಿ ಸಾಮಾಜಿಕ ಅಂತರ ಮರೆತು ಸೇರಿದ್ದಾರೆ. ಜಿಲ್ಲೆಯ ಪ್ರಮುಖ ಜನಪ್ರತಿನಿಧಿಗಳಾದ ಕಾಂಗ್ರೆಸ್ ಮುಖಂಡರಾದ ಬಿ.ಕೆ.ಹರಿಪ್ರಸಾದ್, ಐವನ್ ಡಿಸೋಜಾ, ಮೊಯಿದ್ದೀನ್ ಬಾವಾ ಸೇರಿ ಹಲವರು ಭಾಗಿಯಾಗಿದ್ದು, ವೇದಿಕೆಯಲ್ಲೇ ಸಾಮಾಜಿಕ ಅಂತರವಿಲ್ಲದೇ ಸೇರಿದ್ದಾರೆ. ಅದರಲ್ಲಿ ಕೆಲವರು ಸರಿಯಾಗಿ ಮಾಸ್ಕ್ ಕೂಡ ಧರಿಸದೇ ಸೇರಿದ್ದು, ಡಿಸಿ ಆದೇಶ ಉಲ್ಲಂಘಿಸಿ ಅದ್ದೂರಿ ಸಮಾವೇಶವನ್ನು ಕಾಂಗ್ರೇಸ್ ನಾಯಕರು ಕೈಗೊಂಡಿದ್ದಾರೆ.

ಜಿಲ್ಲಾಧಿಕಾರಿ ಆದೇಶ ಕೇವಲ ಜನಸಾಮಾನ್ಯರಿಗೆ ಮಾತ್ರ ಅನ್ವಯ ಆಗುತ್ತದೋ ಅಥವಾ ಜನಪ್ರತಿನಿಧಿಗಳಿಗೂ ಕಾನೂನು ಅನ್ವಯ ಅನ್ನುವುದು ಈಗ ಪ್ರಶ್ನಾರ್ಥವಾಗಿದೆ. ಆದೇಶ ಉಲ್ಲಂಘಿಸಿರುವ ಜನಪ್ರತಿನಿಧಿಗಳ ವಿರುದ್ದ ಜಿಲ್ಲಾಧಿಕಾರಿ ಯಾವ ಕ್ರಮಕೈಗೊಳ್ಳುತಾರೆ ಕಾದು ನೋಡಬೇಕಿದೆ.