ಬೆಂಗಳೂರು: ಬಿ. ಎಸ್. ಯಡಿಯೂರಪ್ಪ ಉತ್ತರಾಧಿಕಾರಿ ಯಾರು ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಬೊಮ್ಮಾಯಿ ಅವರನ್ನು ಸಿಎಂ ಸ್ಥಾನಕ್ಕೆ ಪರಿಗಣಿಸುವ ಮೂಲಕ ಬಿಜೆಪಿ ಹೈಕಮಾಂಡ್ ರಾಜಕೀಯವಾಗಿ ಭರ್ಜರಿ ಸಿಕ್ಸರ್ ಬಾರಿಸಿದೆ..!
ಪಕ್ಷವನ್ನು ಬೇರು ಮಟ್ಟದಿಂದ ಬೆಳೆಸಿ ಅಧಿಕಾರಕ್ಕೆ ಬಂದಿದ್ದ ಯಡಿಯೂರಪ್ಪ ಅವರ ಅಧಿಕಾರಾವಧಿಯನ್ನು 2 ವರ್ಷಗಳಿಗೇ ಮೊಟಕುಗೊಳಿಸುವ ಮೂಲಕ ಬಿಜೆಪಿ ಹೈಕಮಾಂಡ್ ರಾಜ್ಯದ ಪ್ರಬಲ ವೀರಶೈವ ಲಿಂಗಾಯತ ಸಮುದಾಯದ ಕೆಂಗಣ್ಣಿಗೆ ಗುರಿಯಾಗಲಿದೆ ಎಂಬ ಕೂಗಿಗೆ ಬೊಮ್ಮಾಯಿ ಅಸ್ತ್ರ ಪ್ರಯೋಗ ಮಾಡಲಾಗಿದೆ. ಜೊತೆಯಲ್ಲೇ ವೀರಶೈವ-ಲಿಂಗಾಯತರನ್ನು ಬಿಜೆಪಿ ವಿರುದ್ಧ ಎತ್ತಿ ಕಟ್ಟುವ ಕಾಂಗ್ರೇಸ್ ತಂತ್ರಕ್ಕೂ ಹಿನ್ನಡೆಯಾಗಿದೆ.
ವೀರಶೈವ-ಲಿಂಗಾಯತರಿಗೆ ಸಮಾಧಾನ..?
ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಸ್ಥಾನಕ್ಕೆ ಪರಿಗಣಿಸುವ ಮೂಲಕ ವೀರಶೈವ-ಲಿಂಗಾಯತರ ವಿಶ್ವಾಸವನ್ನು ಬಿಜೆಪಿ ಹೈಕಮಾಂಡ್ ಉಳಿಸಿಕೊಂಡಿದೆ. ಏಕೆಂದರೆ, ಯಡಿಯೂರಪ್ಪ ಅವರನ್ನು ಸಿಎಂ ಪಟ್ಟದಿಂದ ಕೆಳಗಿಳಿಸುತ್ತಾರೆ ಎಂಬ ಸುದ್ದಿ ಹಬ್ಬಿದ್ದೇ ತಡ, ರಾಜ್ಯಾದ್ಯಂತ ವೀರಶೈವ-ಲಿಂಗಾಯತ ಮಠಮಾನ್ಯಗಳು ಯಡಿಯೂರಪ್ಪ ಬೆನ್ನಿಗೆ ನಿಂತಿದ್ದವು.
ಬಸವರಾಜ ಬೊಮ್ಮಾಯಿ, ಅರವಿಂದ ಬೆಲ್ಲದ್ ಅಥವಾ ಬಸನಗೌಡ ಪಾಟೀಲ್ ಯತ್ನಾಳ್ ಯಾರಾದ್ರೂ ಓಕೆ. ಒಟ್ಟಿನಲ್ಲಿ ವೀರಶೈವ-ಲಿಂಗಾಯತರು ಕಳೆದುಕೊಂಡ ಸಿಎಂ ಪಟ್ಟ ಅದೇ ಸಮುದಾಯಕ್ಕೆ ಸಿಗಬೇಕು ಅನ್ನೋದು ಎಲ್ಲರ ವಾದವಾಗಿತ್ತು. ಇದೀಗ ವೀರಶೈವ ಲಿಂಗಾಯತ ಸಮುದಾಯದ ನಾಯಕನೇ ಸಿಎಂ ಆಗಿದ್ದು, ಈ ವರ್ಗ ಸಮಾಧಾನಗೊಂಡಿದೆ.
ಬಿಎಸ್‌ವೈಗೆ ಬಂಪರ್ ಡ್ರಾ…!
ನಿರ್ಗಮಿತ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಇದು ಬಂಪರ್ ಬಹುಮಾನ ಎಂದರೆ ತಪ್ಪಾಗಲಾರದು. ಏಕೆಂದರೆ ನೂತನ ಮುಖ್ಯಮಂತ್ರಿಯಾಗಲಿರುವ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪಗೆ ಮಾತ್ರವಲ್ಲ, ಅವರ ಕುಟುಂಬ ವರ್ಗಕ್ಕೂ ಆಪ್ತರು. ಬಿ. ವೈ. ವಿಜಯೇಂದ್ರ, ರಾಘವೇಂದ್ರ ಸೇರಿದಂತೆ ಹಲವರ ಜೊತೆ ಒಡನಾಟವನ್ನು ಬೊಮ್ಮಾಯಿ ಹೊಂದಿದ್ದಾರೆ. ಯಡಿಯೂರಪ್ಪ ಆಪ್ತರ ಪೈಕಿ ಸದಾ ಮುಂಚೂಣಿಯಲ್ಲಿದ್ದ ಬೊಮ್ಮಾಯಿ, ಹಲವು ಬಾರಿ ಯಡಿಯೂರಪ್ಪ ಪರ ವಹಿಸಿ ಬ್ಯಾಟಿಂಗ್ ಮಾಡಿದ್ದರು.
ಯಡಿಯೂರಪ್ಪ ಆಪ್ತರಾದ ಕಾರಣಕ್ಕಾಗಿಯೇ ಪ್ರಬಲ ಗೃಹ ಖಾತೆಯೂ ಬೊಮ್ಮಾಯಿ ಅವರಿಗೆ ಒಲಿದಿತ್ತು. ದಿಲ್ಲಿಗೆ ತೆರಳಿ ವರಿಷ್ಠರನ್ನ ಭೇಟಿ ಮಾಡುವ ಸಂದರ್ಭದಲ್ಲೂ ವಿಜಯೇಂದ್ರ ಜೊತೆ ಬೊಮ್ಮಾಯಿ ಅವರಿದ್ದರು. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಿಷ್ಠಾಚಾರದ ಪ್ರಕಾರ ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ನೂತನ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆಯಾದರೂ, ಇದು ಹೈಕಮಾಂಡ್ ಹಾಗೂ ಯಡಿಯೂರಪ್ಪ ನಡುವಣ ಒಪ್ಪಂದದಂತೆ ಕಂಡುಬರೋದು ಸುಳ್ಳಲ್ಲ. ಇದೇ ಕಾರಣಕ್ಕೆ ಮಂಗಳವಾರ ಸಂಜೆ ವಿಕ್ಟರಿ ಸನ್ನೆ ಪ್ರದರ್ಶಿಸಿದ್ದರು ಯಡ್ಡಿ.
ಕಾಂಗ್ರೆಸ್ ತಂತ್ರಕ್ಕೆ ಪ್ರತಿತಂತ್ರ..!
ಯಡಿಯೂರಪ್ಪ ಅವರನ್ನು ಸಿಎಂ ಪಟ್ಟದಿಂದ ಕೆಳಗಿಳಿಸುತ್ತಾರೆ ಎಂಬ ಮಾತು ಕೇಳಿಬಂದ ಕೂಡಲೇ ಎಂ. ಬಿ. ಪಾಟೀಲ್, ಶಾಮನೂರು ಶಿವಶಂಕರಪ್ಪ ಫುಲ್ ಆಕ್ಟೀವ್ ಆಗಿಬಿಟ್ಟಿದ್ದರು. ಯಡಿಯೂರಪ್ಪ ಪರ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದ ಎಂ. ಬಿ. ಪಾಟೀಲ್ ಅವರಂತೂ, ಬಿಎಸ್‌ವೈ ಅವರಿಲ್ಲದ ಬಿಜೆಪಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಷ್ಟು ಕಡಿಮೆ ಸ್ಥಾನಗಳು ಸಿಗಬಹುದು ಎಂಬ ಲೆಕ್ಕಾಚಾರ ಹಾಕುತ್ತಿದ್ದರು.
ಇನ್ನು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರಂತೂ ಯಡಿಯೂರಪ್ಪ ಮನೆಯಲ್ಲೇ ಉಪಹಾರ ಪಾಲಿಟಿಕ್ಸ್ ಮಾಡಿದ್ದರು. ಯಡಿಯೂರಪ್ಪ ಪರ ನಮ್ಮ ಬೆಂಬಲ ಎಂದು ಅವರು ಹೇಳುತ್ತಿದ್ದರೂ, ರಾಜಕೀಯ ತಂತ್ರಗಾರಿಕೆ ಬೇರೆಯೇ ಆಗಿತ್ತು. ಒಂದು ವೇಳೆ ವೀರಶೈವ-ಲಿಂಗಾಯತ ಮುಖ್ಯಮಂತ್ರಿಯನ್ನು ಬದಲಿಸಿ ಬೇರೆ ಸಮುದಾಯದವರಿಗೆ ಸಿಎಂ ಪಟ್ಟ ಕೊಟ್ಟರೆ, ಅದು ತಮ್ಮ ಸಮುದಾಯಕ್ಕೆ ಆದ ಅನ್ಯಾಯ ಎಂದು ಬಿಂಬಿಸೋದು ಕಾಂಗ್ರೆಸ್‌ನ ರಾಜಕೀಯ ತಂತ್ರಗಾರಿಕೆಯಾಗಿತ್ತು. ಈ ಮೂಲಕ ವೀರಶೈವ-ಲಿಂಗಾಯತ ಸಮುದಾಯದ ವಿಶ್ವಾಸವನ್ನು ಕಾಂಗ್ರೆಸ್‌ನತ್ತ ಸೆಳೆಯುವ ತಂತ್ರವೂ ಇತ್ತು. ಆದ್ರೆ, ಅವೆಲ್ಲಾ ತಂತ್ರಗಾರಿಕೆಗೆ ಈಗ ಹಿನ್ನಡೆ ಆಗಿದೆ ಅಂದ್ರೆ ತಪ್ಪಾಗಲಾರದು.
ಒಂದು ಹಂತದಲ್ಲಿ ಬಿಜೆಪಿ ಹೈಕಮಾಂಡ್ ಸದಾ ಅಚ್ಚರಿಯ ಆಯ್ಕೆ ಮೂಲಕ ಗಮನ ಸೆಳೆಯುತ್ತದೆಯಾದ್ರೂ, ಈ ಬಾರಿ ಯಡಿಯೂರಪ್ಪ ವಾದಕ್ಕೆ ಬೆಲೆ ಕೊಟ್ಟಿದೆ ಎಂದೇ ವಿಶ್ಲೇಷಿಸಬಹುದು. ಇದು ಮುಂದಿನ ಚುನಾವಣೆ ದೃಷ್ಟಿಯಿಂದ ಬಿಜೆಪಿ ಹೈಕಮಾಂಡ್ ತೆಗೆದುಕೊಂಡಿರುವ ಎಚ್ಚರಿಕೆಯ ಹೆಜ್ಜೆ ಅಲ್ಲದೆ ಮತ್ತೇನೂ ಅಲ್ಲ.
ಎಚ್ಚರಿಕೆಯಿಂದ ಕಲ್ಲು ಹೊಡೆದ ಈ ಬಿಜೆಪಿ ನಡೆಯಿಂದ ಒಂದೇ ಕಲ್ಲಿಗೆ ಮೂರು ಮೂರು ಹಕ್ಕಿಗಳು ಬಿದ್ದಿದ್ದು, ಸಕತ್ ಲಾಭ ಹೊಂದಿರುವುದಂತೂ ಸುಳ್ಳಲ್ಲ.